ರಾಜಕಾರಣಿಗಳು ವಿಡಂಬನೆ ಮತ್ತು ಮಾನಹಾನಿ ನಡುವಿನ ವ್ಯತ್ಯಾಸ ಅರಿತುಕೊಳ್ಳಬೇಕು : ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ,ಸೆ.23: ರಾಜಕೀಯದಲ್ಲಿರುವ ವ್ಯಕ್ತಿಯು ‘ದಪ್ಪ ಚರ್ಮ’ ಹೊಂದಿರಬೇಕು ಎಂದು ದಿಲ್ಲಿ ಹೈಕೋರ್ಟ್ ಮಂಗಳವಾರ ಅಭಿಪ್ರಾಯಿಸಿದೆ. ಆದರೆ ವಿಡಂಬನೆ ಹಾಗೂ ಮಾನಹಾನಿ ನಡುವೆ ವ್ಯತ್ಯಾಸವನ್ನು ಅರಿತುಕೊಳ್ಳಬೇಕಾಗಿದೆ ಎಂದು ದಿಲ್ಲಿ ಹೈಕೋರ್ಟ್ ಮಂಗಳವಾರ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಟಿವಿ ಸುದ್ದಿ ಪ್ರಸಾರ ಕಾರ್ಯಕ್ರಮದಲ್ಲಿ ತಾನು ಕಾಣಿಸಿಕೊಂಡ ರೀತಿಯನ್ನು ಗೇಲಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಮಾನಹಾನಿಕರ ವಿಷಯಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ನಾಯಕ ಹಾಗೂ ಹಿರಿಯ ನ್ಯಾಯವಾದಿ ಗೌರವ್ ಭಾಟಿಯಾ ಸಲ್ಲಿಸಿದ ಅರ್ಜಿಯ ಆಲಿಕೆ ಸಂದರ್ಭ ನ್ಯಾಯಮೂರ್ತಿ ಅಮಿತ್ಬನ್ಸಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಟಿವಿ ಶೋದಲ್ಲಿ ಭಾಟಿಯಾ ಅವರು ಪ್ಯಾಂಟ್ ಇಲ್ಲದೆ ಕೇವಲ ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು. ಟಿವಿಯ ಕ್ಯಾಮರಾಮನ್ ಪ್ರಮಾದವಶಾತ್ ಭಾಟಿಯಾ ಅವರ ದೇಹದ ಕೆಳಭಾಗವನ್ನು ತೋರಿಸಿದ್ದು ವಿವಾದಕ್ಕೆ ಗ್ರಾಸವಾಗಿತ್ತು.
ಈ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಪೋಸ್ಟ್ಗಳು ಭಾಟಿಯಾ ಅವರ ಖಾಸಗಿತನವನ್ನು ಉಲ್ಲಂಘಿಸುತ್ತದೆ. ಆದುದರಿಂದ ಈ ಆಕ್ಷೇಪಾರ್ಹ ಪ್ರತಿಕ್ರಿಯೆಗಳನ್ನು ತೆಗೆದುಹಾಕಬೇಕೆಂದು ಅವರ ವಕೀಲರು ಆಗ್ರಹಿಸಿದ್ದರು.
ಇಂತಹ ಪ್ರಕರಣಗಳಲ್ಲಿ ಏಕಪಕ್ಷೀಯವಾಗಿ ತಡೆಯಾಜ್ಞೆಯನ್ನು ವಿಧಿಸುವಾಗ ನ್ಯಾಯಾಲಯವು ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಹೇಳಿದ ನ್ಯಾಯಾಧೀಶರು ಮುಂದಿನ ಆಲಿಕೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದ್ದಾರೆ.





