ಪ್ರಯಾಣ, ಭದ್ರತಾ ವೆಚ್ಚ ಮನ್ನಾ ಕೋರುವ ಇಂಜಿನಿಯರ್ ರಶೀದ್ ಅರ್ಜಿ; ಭಿನ್ನ ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ, ನ. 7: ಲೋಕಸಭಾ ಕಲಾಪಗಳಿಗೆ ಹಾಜರಾಗಲು ತನ್ನ ಭದ್ರತೆ ಮತ್ತು ಪ್ರಯಾಣಕ್ಕಾಗಿ ಸರಕಾರ ಮಾಡಿರುವ ಖರ್ಚನ್ನು ಮನ್ನಾ ಮಾಡಬೇಕು ಎಂದು ಕೋರಿ ಬಾರಾಮುಲ್ಲಾ ಸಂಸದ ಅಬ್ದುಲ್ ರಶೀದ್ ಶೇಖ್ ಯಾನೆ ಇಂಜಿನಿಯರ್ ರಶೀದ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ನ ವಿಭಾಗ ಪೀಠವೊಂದು ಶುಕ್ರವಾರ ಭಿನ್ನ ತೀರ್ಪು ನೀಡಿದೆ.
ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಅನೂಪ್ ಭಂಭಾನಿ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಮಾಡಿತ್ತು. ಆಗಸ್ಟ್ನಲ್ಲಿ ತೀರ್ಪನ್ನು ಕಾದಿರಿಸಲಾಗಿತ್ತು.
ತೆರೆದ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಚೌಧರಿ, ರಶೀದ್ ರ ಮನವಿಯನ್ನು ತಾನು ತಿರಸ್ಕರಿಸಿದ್ದೇನೆ, ಆದರೆ ನ್ಯಾ. ಭಂಭಾನಿ ಪುರಸ್ಕರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾ. ಭಂಭಾನಿ, ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಪೀಠಕ್ಕೆ ಸಾಧ್ಯವಾಗಲಿಲ್ಲ ಎಂದರು. ಹಾಗಾಗಿ, ಪೀಠವು ಎರಡು ಪ್ರತ್ಯೇಕ ತೀರ್ಪುಗಳನ್ನು ನೀಡುತ್ತಿದೆ ಹಾಗೂ ಆ ತೀರ್ಪುಗಳು ಭಿನ್ನ ಮತ್ತು ಪರಸ್ಪರ ವಿರುದ್ಧವಾಗಿವೆ ಎಂದರು.
ಇನ್ನು ಈ ಅರ್ಜಿಯನ್ನು ಸೂಕ್ತ ನಿರ್ದೇಶನಗಳಿಗಾಗಿ ದಿಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಮುಂದೆ ಇಡಲಾಗುವುದು.
ಭಯೋತ್ಪಾದಕರಿಗೆ ಹಣಕಾಸು ಪೂರೈಸಿದ ಆರೋಪದಲ್ಲಿ ರಶೀದ್ 2019ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಲ್ಲಿ, ಸಂಸತ್ನ ಬಜೆಟ್ ಅಧಿವೇಶನಕ್ಕೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿ ರಶೀದ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಅಂಗೀಕರಿಸಿತ್ತು. ಆದರೆ, ಸಂಸತ್ಗೆ ಹೋಗುವ ಪ್ರಯಾಣ ವೆಚ್ಚ ಮತ್ತು ಭದ್ರತೆ ಸೇರಿದಂತೆ ಇತರ ವೆಚ್ಚಗಳನ್ನು ಅರ್ಜಿದಾರರೇ ಭರಿಸಬೇಕು ಎಂಬ ಶರತ್ತನ್ನು ವಿಧಿಸಿತ್ತು.







