ಅಕ್ರಮ ಬೆಟ್ಟಿಂಗ್ ಮೂಲಕ ಗಳಿಕೆಯು ಅಪರಾಧದ ಆದಾಯ: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | Photo Credit : PTI
ಹೊಸದಿಲ್ಲಿ,ನ.26: ಅಕ್ರಮ ಹಣ ವರ್ಗಾವಣೆ ತನಿಖೆಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಮಹತ್ವದ ತೀರ್ಪೊಂದರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು, ಅಕ್ರಮ ಬೆಟ್ಟಿಂಗ್ ನಿಂದ ಗಳಿಸಿದ ಆದಾಯವನ್ನು, ಅಂತಹ ಚಟುವಟಿಕೆಗೆ ಕಳಂಕಿತ ಹಣವು ಮೂಲವಾಗಿದ್ದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ‘ಅಪರಾಧದ ಆದಾಯ’ ಎಂದು ಪರಿಗಣಿಸಬಹುದು ಎಂದು ಎತ್ತಿ ಹಿಡಿದಿದೆ.
ಹಣದ ಮೂಲವು ಕಾನೂನುಬಾಹಿರವಾಗಿದ್ದರೆ ಅದರಿಂದ ದೊರೆಯುವ ಪ್ರತಿಯೊಂದೂ ಲಾಭವೂ ಅದೇ ಕಾನೂನು ಬಾಹಿರತೆಯನ್ನು ಹೊಂದಿರುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅನಿಲ ಕ್ಷೇತ್ರಪಾಲ ಮತ್ತು ಹರೀಶ್ ವಿ.ಶಂಕರ್ ಅವರ ಪೀಠವು, ಅದನ್ನು ‘ವಿಷಪೂರಿತ ಮರದ ಹಣ್ಣಿಗೆ’ ಹೋಲಿಸಿತು.
ಮೂಲ ಅಪರಾಧ ಆದಾಯಗಳಿಗೆ ಅಂಟಿಕೊಂಡಿರುವ ಕಳಂಕವು ನಂತರದ ಚಟುವಟಿಕೆಗಳನ್ನು ಪಿಎಂಎಲ್ಎ ಅಡಿ ನಿಗದಿತ ಅಪರಾಧಗಳೆಂದು ಪಟ್ಟಿ ಮಾಡಿರದಿದ್ದರೂ ಅವುಗಳಿಗೂ ಮುಂದುವರಿಯುತ್ತದೆ ಎಂದು ಪೀಠವು ಒತ್ತಿ ಹೇಳಿತು.
ವ್ಯಾಪಕ ಕ್ರಿಕೆಟ್ ಬೆಟ್ಟಿಂಗ್ ಕಾರ್ಯಾಚರಣೆ ಕುರಿತು 2015ರ ಜಾರಿ ನಿರ್ದೇಶನಾಲಯದ (ಈಡಿ) ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ಹೊರಬಿದ್ದಿದೆ. ಈಡಿ ಪ್ರಕಾರ ಬೆಟ್ಟಿಂಗ್ ಜಾಲವು ಹಣದ ಚಲಾವಣೆಗಾಗಿ ಸಾಗರೋತ್ತರ ವೇದಿಕೆಗಳು, ಹವಾಲಾ ಆಪರೇಟರ್ ಗಳು ಮತ್ತು ದೇಶಿಯ ನಿರ್ವಾಹಕರನ್ನು ಬಳಸಿಕೊಂಡಿತ್ತು ಮತ್ತು ವಾರ್ಷಿಕ ಸುಮಾರು 2,400 ಕೋಟಿ ರೂ.ಗಳ ವಹಿವಾಟುಗಳು ನಡೆಯುತ್ತಿದ್ದವು.
ಶೋಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ತನಿಖಾಧಿಕಾರಿಗಳು ನಗದು ಹಣ,ದಾಖಲೆಗಳು ಮತ್ತು ಡಿಜಿಟಲ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು,ಇವು ಪ್ರಮುಖ ಆರೋಪಿಗಳು ವಿಶೇಷ ಲಾಗಿನ್ ಐಡಿಗಳ ಮೂಲಕ ವಿದೇಶಿ ಬೆಟ್ಟಿಂಗ್ ಪೋರ್ಟಲ್ ಗಳಿಗೆ ಪ್ರವೇಶವನ್ನು ನಿಯಂತ್ರಿಸಿದ್ದರು ಎನ್ನುವುದನ್ನು ಸೂಚಿಸಿತ್ತು. ಬೆಟ್ಟಿಂಗ್ ಲಾಭಗಳು ನೇರವಾಗಿ ನಿಗದಿತ ಅಪರಾಧದಿಂದ ಸೃಷ್ಟಿಯಾಗಿರದಿದ್ದರೂ ಅವುಗಳನ್ನು ಈಗಾಗಲೇ ಅಕ್ರಮ ಚಟುವಟಿಕೆಯೊಂದಿಗೆ ಗುರುತಿಸಿಕೊಂಡಿದ್ದ ಹಣವನ್ನು ಬಳಸಿ ಗಳಿಸಲಾಗಿತ್ತು ಎಂದು ಈಡಿವಾದಿಸಿತ್ತು.
ಸೊತ್ತುಗಳನ್ನು ಜಪ್ತಿ ಮಾಡಿದ್ದನ್ನು ಪ್ರಶ್ನಿಸಿದ್ದ ಆರೋಪಿಗಳು, ಬೆಟ್ಟಿಂಗ್ ನಿಗದಿತ ಅಪರಾಧವಲ್ಲ,ಹೀಗಾಗಿ ಅದರ ಗಳಿಕೆಯನ್ನು ಪಿಎಂಎಲ್ಎ ಅಡಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಪ್ರತಿಪಾದಿಸಿದ್ದರು.
ಆರೋಪಿಗಳ ವಾದವನ್ನು ತಿರಸ್ಕರಿಸಿದ ಉಚ್ಚ ನ್ಯಾಯಾಲಯವು, ‘ಅಪರಾಧದ ಆದಾಯ’ದ ಪಿಎಂಎಲ್ಎ ವ್ಯಾಖ್ಯಾನವು ಉದ್ದೇಶಪೂರ್ವಕವಾಗಿ ವಿಶಾಲವಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು. ಆರಂಭಿಕ ನಿಧಿಯ ಕ್ರಿಮಿನಲ್ ಸ್ವರೂಪ ಮುಖ್ಯವೇ ಹೊರತು ನಂತರದ ಚಟುವಟಿಕೆಗಳ ಸ್ವರೂಪವಲ್ಲ ಎಂದು ಪೀಠವು ಹೇಳಿತು.
ಕಳಂಕಿತ ಹಣವನ್ನು ಬಂಡವಾಳವಾಗಿ ಬಳಸಿದಾಗ ಅದರಿಂದ ದೊರೆಯುವ ಯಾವುದೇ ಲಾಭವೂ ಕಳಂಕಿತವಾಗಿರುತ್ತದೆ ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಅರ್ಹವಾಗಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.







