ಡಬ್ಲ್ಯುಎಫ್ಐ ಚುನಾವಣೆ ಪ್ರಶ್ನಿಸಿದ ಬಜರಂಗ್ ಪುನಿಯ, ವಿನೇಶ್ ಫೋಗಾಟ್ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

ವಿನೇಶ್ ಫೋಗಾಟ್ , ಬಜರಂಗ್ ಪುನಿಯ | Photo Credit : PTI
ಹೊಸದಿಲ್ಲಿ, ಡಿ. 2: ರಾಷ್ಟ್ರೀಯ ಕುಸ್ತಿ ಒಕ್ಕೂಟ (ಡಬ್ಲುಎಫ್ಐ) 2023 ಡಿಸೆಂಬರ್ನಲ್ಲಿ ನಡೆಸಿದ ಚುನಾವಣೆಯನ್ನು ಪ್ರಶ್ನಿಸಿ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಹಾಗೂ ಸತ್ಯವೃತ ಕಾದಿಯಾನ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಳ್ಳಿ ಹಾಕಿದೆ.
ಡಬ್ಲುಎಫ್ಐಗೆ ಆಗ ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಅನಿತ ಶ್ಯೋರಾಣಾ ಅವರನ್ನು ಸೋಲಿಸಿದ್ದರು. ಅನಿತಾ ಶ್ಯೋರಾಣಾ ಅವರಿಗೆ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಬೆಂಬಲ ನೀಡಿದ್ದರು.
ನ್ಯಾಯಮೂರ್ತಿ ಮಿನಿ ಪುಷ್ಕರನಾ ನವೆಂಬರ್ 27ರಂದು ಪ್ರಕರಣದ ವಿಚಾರಣೆ ನಡೆಸಿದರು. ಪ್ರಕರಣ ವಿಚಾರಣೆಗೆ ಬಂದಾಗ ಅರ್ಜಿದಾರರು ಯಾರೂ ಹಾಜರಿರಲಿಲ್ಲ ಎಂಬುದನ್ನು ಅವರು ಗಮನಿಸಿದರು. ಹಿಂದಿನ ಎರಡು ವಿಚಾರಣೆಗಳಿಗೆ ಕೂಡ ಅವರು ಗೈರು ಹಾಜರಾಗಿದ್ದಾರೆ ಎಂದು ಅವರು ದಾಖಲಿಸಿದರು.
‘‘ಅರ್ಜಿದಾರರು ಪ್ರಸಕ್ತ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವ ಆಸಕ್ತಿ ಹೊಂದಿದಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ರಾಷ್ಟ್ರೀಯ ಕುಸ್ತಿ ಒಕ್ಕೂಟದ ಚುನಾವಣೆಯನ್ನು ನ್ಯಾಯಯುತ ಹಾಗೂ ಪಾರದರ್ಶಕ ವಿಧಾನದಲ್ಲಿ ನಡೆಸಿಲ್ಲ ಎಂದು ಆರೋಪಿಸಿ ಕುಸ್ತಿ ಪಟುಗಳು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಚುನಾವಣಾ ಪ್ರಕ್ರಿಯೆಯ ಕಾರ್ಯ ವಿಧಾನದಲ್ಲಿ ಲೋಪಗಳು ಹಾಗೂ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು. ಅರ್ಜಿದಾರರು ನಿರಂತರ ಹಾಜರಾಗದೇ ಇರುವುದರಿಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.







