ಸಣ್ಣ ಮಗುವಿನಿಂದ ಖಾಸಗಿ ಅಂಗ ಮುಟ್ಟಿಸಿಕೊಳ್ಳುವುದು ಗಂಭೀರ ಲೈಂಗಿಕ ಅಪರಾಧ: Delhi ಹೈಕೋರ್ಟ್

ದಿಲ್ಲಿ ಹೈಕೋರ್ಟ್ | Photo Credit : PTI
ಹೊಸದಿಲ್ಲಿ, ಜ. 6: ಲೈಂಗಿಕ ಭಾವನೆಯಿಂದ ಸಣ್ಣ ಮಗುವಿನಿಂದ ಖಾಸಗಿ ಭಾಗಗಳನ್ನು ಮುಟ್ಟಿಸಿಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯಡಿ ಗಂಭೀರ ಲೈಂಗಿಕ ದೌರ್ಜನ್ಯವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಪೋಕ್ಸೊ ಕಾಯ್ದೆಯ ಪರಿಚ್ಛೇದ 10ರಡಿ ತನ್ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ತೀರ್ಪು ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿದ್ದಾರೆ. ಆ ವ್ಯಕ್ತಿಯು ಸುಮಾರು ನಾಲ್ಕು ವರ್ಷದ ಹೆಣ್ಣು ಮಗುವಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಮಗುವಿನಿಂದ ಮುಟ್ಟಿಸಿಕೊಂಡಿದ್ದನು ಎಂಬ ಆರೋಪವಿದೆ.
ಪೋಕ್ಸೊ ಪ್ರಕಾರ, 12 ವರ್ಷಕ್ಕಿಂತ ಕೆಳಗಿನ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಗಂಭೀರ ಲೈಂಗಿಕ ದೌರ್ಜನ್ಯವಾಗಿ ಪರಿಗಣಿಸಲಾಗುತ್ತದೆ.
ಮಗುವಿನ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಆರೋಪಿಯನ್ನು ದೋಷಿ ಎಂದು 2024ರ ಜುಲೈನಲ್ಲಿ ವಿಚಾರಣಾ ನ್ಯಾಯಾಲಯ ಘೋಷಿಸಿದ್ದು, ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.





