ಪತ್ರಕರ್ತ ಮಹಮ್ಮದ್ ಝುಬೈರ್ ರನ್ನು ʼಜಿಹಾದಿʼ ಎಂದು ಕರೆದ ವ್ಯಕ್ತಿಗೆ ಕ್ಷಮೆಯಾಚಿಸಲು ಸೂಚಿಸಿದ ದಿಲ್ಲಿ ಹೈಕೋರ್ಟ್

ಮಹಮ್ಮದ್ ಝುಬೈರ್ (PC : X \@zoo_bear), ದಿಲ್ಲಿ ಹೈಕೋರ್ಟ್ (PTI)
ಹೊಸದಿಲ್ಲಿ: 2020 ರಲ್ಲಿ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಝುಬೈರ್ ಅವರನ್ನು "ಜಿಹಾದಿ" ಎಂದು X (ಟ್ವಿಟರ್) ನಲ್ಲಿ ಟ್ವೀಟ್ ಮಾಡಿದ್ದಕ್ಕಾಗಿ ಜಗದೀಶ್ ಸಿಂಗ್ ಎಂಬ ವ್ಯಕ್ತಿಗೆ ದಿಲ್ಲಿ ಹೈಕೋರ್ಟ್ ಕ್ಷಮೆಯಾಚಿಸುವಂತೆ ಸೂಚಿಸಿದೆ.
ಒಂದು ವಾರದೊಳಗೆ ತಮ್ಮ ಎಕ್ಸ್ ಖಾತೆಯಲ್ಲಿ ಕ್ಷಮಾಪಣೆಯನ್ನು ಪೋಸ್ಟ್ ಮಾಡುವಂತೆ ಸಿಂಗ್ ಅವರಿಗೆ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ಸೂಚಿಸಿದ್ದು, ಟ್ವೀಟ್ ಅನ್ನು ಕನಿಷ್ಠ ಎರಡು ತಿಂಗಳ ಕಾಲ ಅಲ್ಲಿಯೇ ಉಳಿಸಿಕೊಳ್ಳಬೇಕು ಎಂದೂ ನಿರ್ದೇಶನ ನೀಡಿದೆ.
"ಯಾವುದೇ ದುರುದ್ದೇಶದಿಂದ ಅಥವಾ ಮಹಮ್ಮದ್ ಝುಬೈರ್ ಅವರನ್ನು ನೋಯಿಸುವ ಉದ್ದೇಶವಿಲ್ಲದ ಈ ಮೇಲಿನ ಕಾಮೆಂಟ್ ಮಾಡಿರುವುದಕ್ಕೆ ನಾನು ವಿಷಾದಿಸುತ್ತೇನೆ" ಎಂಬ ಪಠ್ಯದೊಂದಿಗೆ ಪೋಸ್ಟ್ ಮಾಡಬೇಕಾಗಿದೆ ಎಂದು ನ್ಯಾಯಾಲಯ ಸೂಚಿಸಿದೆ.
ಜಗದೀಶ್ ಸಿಂಗ್ ಪರ ವಾದ ಮಂಡಿಸಿದ ವಕೀಲ, ಸಿಂಗ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಆಕ್ಷೇಪಾರ್ಹ ಕಾಮೆಂಟ್ಗಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.





