ಬಟಾಟೆ ಪೇಟೆಂಟ್ ರದ್ದತಿ ವಿರುದ್ಧ ಪೆಪ್ಸಿಕೋ ಮೇಲ್ಮನವಿಗೆ ದಿಲ್ಲಿ ಹೈಕೋರ್ಟ್ ತಿರಸ್ಕಾರ

Photo: PTI
ಹೊಸದಿಲ್ಲಿ: ತನ್ನ ಜನಪ್ರಿಯ ಲೇಸ್ ಚಿಪ್ಸ್ ಗಳಿಗಾಗಿ ವಿಶೇಷವಾಗಿ ಬೆಳೆಸಲಾದ ಬಟಾಟೆ ತಳಿಗೆ ಪೇಟೆಂಟ್ ಅನ್ನು ರದ್ದುಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಸಲ್ಲಿಸಿದ್ದ ಮೇಲ್ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಪೆಪ್ಸಿಕೋ ತನ್ನ ಎಫ್ಸಿ5 ಬಟಾಟೆ ತಳಿಗೆ ಪಡೆದುಕೊಂಡಿದ್ದ ಪೇಟೆಂಟ್ ಅನ್ನು ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ ಪ್ರಾಧಿಕಾರವು 2021ರಲ್ಲಿ ರದ್ದುಗೊಳಿಸಿತ್ತು. ಕಂಪನಿಯು ಬೀಜ ಪ್ರಭೇದದ ಮೇಲೆ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ರೈತರ ಹಕ್ಕುಗಳ ಕಾರ್ಯಕರ್ತೆ ಕವಿತಾ ಕುರುಗಂಟಿ ಅವರ ವಾದವನ್ನು ಪುರಸ್ಕರಿಸಿದ್ದ ಪ್ರಾಧಿಕಾರವು, ಬೀಜ ಪ್ರಭೇದಗಳಿಗೆ ಪೇಟೆಂಟನ್ನು ಭಾರತೀಯ ನಿಯಮಗಳು ಅನುಮತಿಸುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಪ್ರಾಧಿಕಾರದ ಆದೇಶವನ್ನು ಪೆಪ್ಸಿಕೋ ದಿಲ್ಲಿ ಉಚ್ಚ ನ್ಯಾಯಾಲದಲ್ಲಿ ಪ್ರಶ್ನಿಸಿತ್ತು.
ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾ.ನವೀನ್ ಚಾವ್ಲಾ ಅವರು ಜು.5ರ ತನ್ನ ಆದೇಶದಲ್ಲಿ ಪೆಪ್ಸಿಕೋದ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ. ‘ಆದೇಶವನ್ನು ನಾವು ಪರಿಶೀಲಿಸುತ್ತಿದ್ದೇವೆ ’ ಎಂದು ಪೆಪ್ಸಿಕೋ ಇಂಡಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
1989ರಲ್ಲಿ ಭಾರತದಲ್ಲಿ ತನ್ನ ಮೊದಲ ಬಟಾಟೆ ಚಿಪ್ಸ್ ತಯಾರಿಕೆ ಘಟಕವನ್ನು ಸ್ಥಾಪಿಸಿದ ಪೆಪ್ಸಿಕೋ ರೈತರ ಗುಂಪೊಂದಕ್ಕೆ ಎಫ್ಸಿ5 ಬೀಜಗಳನ್ನು ಪೂರೈಸುತ್ತದೆ ಮತ್ತು ಈ ರೈತರು ತಾವು ಬೆಳೆದ ಬಟಾಟೆಯನ್ನು ಕಂಪನಿಗೆ ನಿಗದಿತ ದರದಲ್ಲಿ ಮಾರಾಟ ಮಾಡುತ್ತಾರೆ.
ಎಫ್ಸಿ5 ತಳಿಯನ್ನು ತಾನು ವಿಶೇಷವಾಗಿ ಅಭಿವೃದ್ಧಿಗೊಳಿಸಿದ್ದೇನೆ ಮತ್ತು 2016ರಲ್ಲಿ ಅದರ ಗುಣಲಕ್ಷಣಗಳನ್ನು ನೋಂದಣಿ ಮಾಡಿಸಿದ್ದೇನೆ ಎಂದು ಪೆಪ್ಸಿಕೋ ಸಮರ್ಥಿಸಿಕೊಂಡಿತ್ತು. ಎಫ್ಸಿ5 ಪ್ರಭೇದವು ಬಟಾಟೆ ಚಿಪ್ಸ್ಗಳಂತಹ ಖಾದ್ಯಗಳ ತಯಾರಿಕೆಗೆ ಅಗತ್ಯವಾದ ಕಡಿಮೆ ತೇವಾಂಶವನ್ನು ಹೊಂದಿದೆ.
ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಕುರುಗಂಟಿ ಸ್ವಾಗತಿಸಿದ್ದಾರೆ.
2019ರಲ್ಲಿ ಪೆಪ್ಸಿಕೋ ಎಫ್ಸಿ5 ಬಟಾಟೆ ತಳಿಯನ್ನು ಬೆಳೆದಿದ್ದಕ್ಕಾಗಿ ಕೆಲವು ಭಾರತೀಯ ರೈತರ ವಿರುದ್ಧ ಮೊಕದ್ದಮೆಗಳನ್ನು ಹೂಡಿತ್ತು. ಬೆಳೆಗಾರರು ತನ್ನ ಪೇಟೆಂಟ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದ ಕಂಪನಿಯು ಅದಕ್ಕಾಗಿ ತಲಾ ಒಂದು ಕೋ.ರೂ.ಗೂ ಹೆಚ್ಚಿನ ಪರಿಹಾರವನ್ನು ಕೋರಿತ್ತು. ಕೆಲವೇ ತಿಂಗಳುಗಳಲ್ಲಿ ಅದು ರೈತರ ವಿರುದ್ಧದ ಮೊಕದ್ದಮೆಗಳನ್ನು ಹಿಂದೆಗೆದುಕೊಂಡಿತ್ತು. ಪೆಪ್ಸಿಕೋ ಭಾರತದಲ್ಲಿ ಪೇಟೆಂಟ್ ಉಲ್ಲಂಘನೆಯ ಸಮಸ್ಯೆಗಳನ್ನು ಎದುರಿಸಿದ ಅಮೆರಿಕದ ಎರಡನೇ ಬೃಹತ್ ಕಂಪನಿಯಾಗಿದೆ.
ಸುದೀರ್ಘ ಬೌದ್ಧಿಕ ಆಸ್ತಿ ವಿವಾದದ ಬಳಿಕ ಬೀಜಗಳ ಉತ್ಪಾದಕ ಮಾನ್ಸಾಂಟೊ ಭಾರತದಲ್ಲಿನ ತನ್ನ ಕೆಲವು ಉದ್ಯಮಗಳಿಂದ ಹಿಂದೆ ಸರಿದಿತ್ತು. ಅದೀಗ ಜರ್ಮನ್ ಔಷಧಿ ತಯಾರಕ ಸಂಸ್ಥೆ ಬೇಯರ್ ಎಜಿ ಒಡೆತನದಲ್ಲಿದೆ.







