ಚ್ಯವನ್ ಪ್ರಾಶ್ ಜಾಹೀರಾತು ಹಿಂದಕ್ಕೆ ಪಡೆಯುವಂತೆ ಪತಂಜಲಿಗೆ ದಿಲ್ಲಿ ಹೈಕೋರ್ಟ್ ಆದೇಶ

ಹೊಸದಿಲ್ಲಿ, ನ. 11: ಜಾಹೀರಾತು ನೀಡುವ ಮೂಲಭೂತ ಹಕ್ಕು ಸುಳ್ಳು ಪ್ರಚಾರ, ಅಪಪ್ರಚಾರ ಅಥವಾ ಎದುರಾಳಿಯ ಹೀಯಾಳಿಕೆಗೆ ಅನ್ವಯಿಸುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಎದುರಾಳಿ ಉತ್ಪನ್ನಗಳನ್ನು ‘‘ವಂಚನೆ’’ ಎಂದು ಬಣ್ಣಿಸುವ ತನ್ನ ಚ್ಯವನ್ ಪ್ರಾಶ್ ಜಾಹೀರಾತನ್ನು 72 ಗಂಟೆಗಳಲ್ಲಿ ತೆಗೆದುಹಾಕುವಂತೆ ಪತಂಜಲಿಗೆ ನಿರ್ದೇಶನ ನೀಡಿದೆ.
ಜಾಹೀರಾತೊಂದು ಸುಳ್ಳು ಹೇಳಿದರೆ, ತಪ್ಪುದಾರಿಗೆಳೆದರೆ, ಅನುಚಿತವಾದರೆ ಅಥವಾ ವಂಚನೆಯಿಂದ ಕೂಡಿದರೆ ಅದು ತನ್ನ ಸಾಂವಿಧಾನಿಕ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ತೇಜಸ್ ಕಾರಿಯ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಚ್ಯವನ್ ಪ್ರಾಶ್ ಗೆ ಸ್ಪರ್ಧೆ ನೀಡುವ ಎಲ್ಲಾ ಉತ್ಪನ್ನಗಳನ್ನು ‘‘ಮೋಸ’’ ಎಂಬುದಾಗಿ ಬಣ್ಣಿಸುವುದು ವಾಣಿಜ್ಯಿಕ ಅವಮಾನವಾಗುತ್ತದೆ ಎಂದು ತನ್ನ 37 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ‘‘ಚ್ಯವನ್ ಪ್ರಾಶಕ್ಕೆ ಸ್ಪರ್ಧೆ ನೀಡುವ ಎಲ್ಲಾ ಉತ್ಪನ್ನಗಳು ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂಬ ಸಂದೇಶವನ್ನು ನೀಡಲು ಪ್ರತಿವಾದಿಗಳು (ಪತಂಜಲಿ) ಪ್ರಯತ್ನಿಸಿದ್ದಾರೆ ಎನ್ನುವುದು ವಿವಾದಿತ ಜಾಹೀರಾತನ್ನು ನೋಡಿದಾಗ ಗೊತ್ತಾಗುತ್ತದೆ’’ ಎಂದು ಮಂಗಳವಾರ ನೀಡಿದ ತನ್ನ ಆದೇಶದಲ್ಲಿ ದಿಲ್ಲಿ ಹೈಕೋರ್ಟ್ ತಿಳಿಸಿದೆ.
‘‘ಜಾಹೀರಾತೊಂದು ತನ್ನ ಅನುಮೋದಿತ ಮಿತಿಗಳನ್ನು ಮೀರಿ ಸುಳ್ಳು ಹೇಳಿದಾಗ, ಜನರನ್ನು ತಪ್ಪು ದಾರಿಗೆಳೆದಾಗ, ಅನುಚಿತವಾಗಿ ವರ್ತಿಸಿದಾಗ ಅಥವಾ ಮೋಸ ಮಾಡಿದಾಗ, ಅದು ಸಂವಿಧಾನದ 19(1)(ಚಿ) ವಿಧಿ ಖಾತರಿಪಡಿಸುವ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ’’ ಎಂದು ನ್ಯಾಯಾಲಯ ಹೇಳಿದೆ.
ಪತಂಜಲಿಯ ಚ್ಯವನ್ ಪ್ರಾಶ್ ಉತ್ಪನ್ನದ ಜಾಹೀರಾತನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ನಿರ್ದೇಶನ ನೀಡುವಂತೆ ಕೋರಿ ಡಾಬರ್ ಕಂಪೆನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ದಿಲ್ಲಿ ಹೈಕೋರ್ಟ್ ಈತ ತೀರ್ಪು ನೀಡಿದೆ.







