ಎರಡು ಕೋ.ರೂ.ಪರಿಹಾರ ನೀಡುವಂತೆ ತೆಹೆಲ್ಕಾ, ತರುಣ್ ತೇಜಪಾಲ್ ಗೆ ದಿಲ್ಲಿ ಹೈಕೋರ್ಟ್ ಆದೇಶ
ಸೇನಾಧಿಕಾರಿ ವಿರುದ್ಧ ಮಾನಹಾನಿಕರ ವರದಿ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: 2001ರಲ್ಲಿ ಹಿರಿಯ ಸೇನಾಧಿಕಾರಿಯೋರ್ವರ ವಿರುದ್ಧ ಮಾನಹಾನಿಕರ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ತೆಹೆಲ್ಕಾ ಮ್ಯಾಗಝಿನ್,ಅದರ ಮಾಜಿ ಮುಖ್ಯ ಸಂಪಾದಕ ತರುಣ ತೇಜಪಾಲ್ ಹಾಗೂ ಮಾಜಿ ವರದಿಗಾರರಾದ ಅನಿರುದ್ಧ ಬಹಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರನ್ನು ತಪ್ಪಿತಸ್ಥರೆಂದು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿಹಿಡಿದಿದೆ.
ಮಾಜಿ ಮೇಜರ್ ಜನರಲ್ ಎಂ.ಎಸ್.ಅಹುವಾಲಿಯಾ ಅವರಿಗೆ ಎರಡು ಕೋ.ರೂ.ಗಳ ಪರಿಹಾರವನ್ನು ಪಾವತಿಸುವಂತೆಯೂ ನ್ಯಾಯಾಲಯವು ಅವರಿಗೆ ಆದೇಶಿಸಿದೆ.
ತೆಹೆಲ್ಕಾ ಪ್ರಕಟಿಸಿದ್ದ ವರದಿಯು ನೂತನ ರಕ್ಷಣಾ ಉಪಕರಣದ ಆಮದಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿತ್ತು. ಕುಟುಕು ಕಾರ್ಯಾಚರಣೆ ನಡೆಸಿದ್ದ ಬಹಲ್ ಮತ್ತು ಸ್ಯಾಮ್ಯುಯೆಲ್ ಲಂಡನ್ ಮೂಲದ ಕಾಲ್ಪನಿಕ ರಕ್ಷಾ ಉಪಕರಣ ಕಂಪನಿಯ ಪ್ರತಿನಿಧಿಗಳಾಗಿ ತಮ್ಮನ್ನು ಬಿಂಬಿಸಿಕೊಂಡಿದ್ದರು.
ಅಹ್ಲುವಾಲಿಯಾ ಅವರು ಲಂಚವಾಗಿ 10 ಲ.ರೂ.ಮತ್ತು ಬ್ಲೂ ಲೇಬಲ್ ವಿಸ್ಕಿ ಬಾಟಲ್ಗಾಗಿ ಬೇಡಿಕೆಯಿಟ್ಟಿದ್ದರು ಮತ್ತು ಮುಂಗಡವಾಗಿ 50,000 ರೂ.ಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ರಕ್ಷಣಾ ಉಪಕರಣಗಳ ಆಮದುಗಳಲ್ಲಿ ತಾನು ಭಾಗಿಯಾಗಿರಲಿಲ್ಲ ಮತ್ತು ಎಂದಿಗೂ ಅಂತಹ ಹುದ್ದೆಯನ್ನು ಹೊಂದಿರಲಿಲ್ಲ ಎಂದು ಅಹ್ಲುವಾಲಿಯಾ ಮಾನನಷ್ಟ ಮೊಕದ್ದಮೆಯಲ್ಲಿ ಪ್ರತಿಪಾದಿಸಿದ್ದರು. ಅಹ್ಲುವಾಲಿಯಾ ಲಂಚಕ್ಕಾಗಿ ಬೇಡಿಕೆಯಿಟ್ಟಿರಲಿಲ್ಲ ಮತ್ತು ಲಂಚವನ್ನು ಪಡೆದಿಲ್ಲ ಎಂದು ಸ್ವತಃ ಸ್ಯಾಮ್ಯುಯೆಲ್ ಸೇನಾ ವಿಚಾರಣಾ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದರು.







