ಸುಶಾಂತ್ ಸಿಂಗ್ ಜೀವನಾಧಾರಿತ ಚಲನಚಿತ್ರದ ಆನ್ಲೈನ್ ಸ್ಟ್ರೀಮಿಂಗ್ ನಿಷೇಧಿಸಲು ದಿಲ್ಲಿ ಹೈಕೋರ್ಟ್ ಹಿಂದೇಟು

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ | Photo: PTI
ಹೊಸದಿಲ್ಲಿ: ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಖಾಸಗಿ ಮಾಹಿತಿಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿರುವ ಚಿತ್ರಕ್ಕೆ ತಡೆ ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ.
ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮ್ ಆಗುತ್ತಿರುವ 'ನ್ಯಾಯ್: ದಿ ಜಸ್ಟೀಸ್' ಚಲನಚಿತ್ರದಲ್ಲಿ ಮಾನಹಾನಿಕರ ಹೇಳಿಕೆಗಳು ಇದೆ ಎಂದು ಆರೋಪಿಸಿ ಮೃತ ಚಿತ್ರನಟ ಸುಶಾಂತ್ ಸಿಂಗ್ ರ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ವಜಾಗೊಳಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರು ವಾಣಿಜ್ಯ ಲಾಭಕ್ಕಾಗಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ಮಗನ ಹೆಸರು ಅಥವಾ ಆತನ ಜೀವನದ ಹೋಲಿಕೆಯನ್ನು ಚಲನಚಿತ್ರಗಳಲ್ಲಿ ಬಳಸದಂತೆ ನಿರ್ಮಾಪಕರನ್ನು ತಡೆಯುವಂತೆ ಅವರ ತಂದೆ ಅರ್ಜಿಯಲ್ಲಿ ಹೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಸಿ.ಹರಿ ಶಂಕರ್ ಅವರು ಈ ಅರ್ಜಿಯನ್ನು ವಜಾಗೊಳಿಸಿದ್ದು, ಸುಶಾಂತ್ ಸಿಂಗ್ ರಜಪೂತ್ ಅವರ ಖಾಸಗಿತನದ ಹಕ್ಕಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಆಕ್ಷೇಪಾರ್ಹ ಚಲನಚಿತ್ರದಲ್ಲಿ ತೋರಿಸಿರುವ ಮಾಹಿತಿಯು ಸಂಪೂರ್ಣವಾಗಿ ಮಾಧ್ಯಮದಲ್ಲಿನ ವಸ್ತುಗಳಿಂದ ಪಡೆಯಲಾಗಿದೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಅಂತಹ ಮಾಹಿತಿಯ ಮೇಲೆ ಮಾಡಿದ ಚಲನಚಿತ್ರವು ಮೃತ ನಟನ ಯಾವುದೇ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗುವುದಿಲ್ಲ. ಚಲನಚಿತ್ರವು ಭಾರತದ ಸಂವಿಧಾನದ 19(2) ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.







