ಕೇಜ್ರಿವಾಲ್ ಬಿಡುಗಡೆಗೆ ಮಧ್ಯಂತರ ಆದೇಶ ನೀಡಲು ದಿಲ್ಲಿ ಹೈಕೋರ್ಟ್ ನಕಾರ | ಏಪ್ರಿಲ್ 3ಕ್ಕೆ ಮುಂದಿನ ವಿಚಾರಣೆ

ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ : ತನ್ನ ಬಿಡುಗಡೆಗೆ ಮಧ್ಯಂತರ ಆದೇಶ ನೀಡಬೇಕೆಂದು ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಎಪ್ರಿಲ್ 2ರೊಳಗೆ ಉತ್ತರಿಸುವಂತೆ ದಿಲ್ಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ (ಈಡಿ) ಬುಧವಾರ ನೋಟಿಸ್ ಜಾರಿಗೊಳಿಸಿದೆ.
ತನ್ನ ಬಂಧನ ಪ್ರಶ್ನಿಸುವ ಮುಖ್ಯ ರಿಟ್ ಅರ್ಜಿ ಹಾಗೂ ಬಿಡುಗಡೆಗೆ ಮಧ್ಯಂತರ ಆದೇಶ ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಈಡಿಗೆ ನೋಟಿಸ್ ನೀಡಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಮುಂದಿನ ವಿಚಾರಣೆಯನ್ನು ಎಪ್ರಿಲ್3 ಕ್ಕೆ ನಿಗದಿಪಡಿಸಿದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜಾ ಅವರು ಈಡಿ ಪರವಾಗಿ ವಾದ ಮಂಡಿಸುತ್ತಾ, ಕೇಜ್ರಿವಾಲ್ ಅವರ ವಕೀಲರು ಕೊನೆಯ ಕ್ಷಣದಲ್ಲಿ ಅರ್ಜಿಯ ಪ್ರತಿಯನ್ನು ಏಜೆನ್ಸಿ ಜೊತೆ ಹಂಚಿಕೊಂಡಿದ್ದಾರೆ. ಆದುದರಿಂದ ಈ ಬಗ್ಗೆ ಉತ್ತರವನ್ನು ಸಲ್ಲಿಸಲು ಹಾಗೂ ನಿರ್ದಿಷ್ಟ ವಿಷಯಗಳನ್ನು ಗುರುತು ಮಾಡಿ ತೋರಿಸಲು ಜಾರಿ ನಿರ್ದೇಶನಾಲಯಕ್ಕೆ ಕಾಲಾವಕಾಶದ ಅಗತ್ಯವಿದೆ ಎಂದರು.
ಅಬಕಾರಿ ನೀತಿ ಪರಿಷ್ಕರಣೆಗೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ತನ್ನನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಯಿಂದ ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಕೇಜ್ರಿವಾಲ್ ಅವರು ದಿಲ್ಲಿ ಹೈಕೋರ್ಟ್ನಲ್ಲಿ ಆಗ್ರಹಿಸಿದ್ದರು. ಚುನಾವಣೆಯ ಸಮಯದಲ್ಲಿ ತನ್ನನ್ನು ಬಂಧಿಸಿರುವುದು ಸಂವಿಧಾನದ ಮೂಲಭೂತ ಚೌಕಟ್ಟಿಗೆ ವಿರುದ್ಧವಾದುದಾಗಿದೆ ಎಂದು ಅವರು ಹೇಳಿದರು.







