ಪಿಎಂ ಕೇರ್ಸ್ ನಿಧಿಯ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತರು ನೀಡಿದ್ದ ಆದೇಶವನ್ನು ಬದಿಗಿರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಮಾಹಿತಿ ಹಕ್ಕು ಅರ್ಜಿದಾರರೊಬ್ಬರಿಗೆ ಪಿಎಂ ಕೇರ್ಸ್ ನಿಧಿಯ ಮಾಹಿತಿಯನ್ನು ಒದಗಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತರು ನೀಡಿದ್ದ ಆದೇಶವನ್ನು ಸೋಮವಾರ ದಿಲ್ಲಿ ಹೈಕೋರ್ಟ್ ಬದಿಗಿರಿಸಿದೆ ಎಂದು newindianexpress.com ವರದಿ ಮಾಡಿದೆ.
ಈ ಕುರಿತು ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಮಾಹಿತಿ ಹಕ್ಕು ಅರ್ಜಿದಾರರು ಪಿಎಂ ಕೇರ್ಸ್ ನಿಧಿ ಕುರಿತ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರಿಂದ ಕೋರಿದ್ದಾರೆಯೇ ಹೊರತು ಪಿಎಂ ಕೇರ್ಸ್ ನಿಧಿಯಿಂದ ಅಲ್ಲ ಹಾಗೂ ಆದಾಯ ತೆರಿಗೆ ಇಲಾಖೆಯು ಪಿಎಂ ಕೇರ್ಸ್ ನಿಧಿಯನ್ನು ಒಂದು ಪ್ರಾಧಿಕಾರವಾಗಿ ಪರಿಗಣಿಸಿಲ್ಲ ಎಂದು ಹೇಳಿದೆ.
“ಮಾಹಿತಿ ಹಕ್ಕು ಅರ್ಜಿದಾರರು ಮೂರನೆ ವ್ಯಕ್ತಿ ಎಂದು ಹೇಳಲಾಗಿರುವ ಪಿಎಂ ಕೇರ್ಸ್ ನಿಧಿಯಿಂದ ಮಾಹಿತಿಯನ್ನು ಬಯಸಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 11ರ ಪ್ರಕಾರ, ಹಾಗೆ ಹೇಳಲಾಗಿರುವ ಮೂರನೆಯ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿದ ನಂತರವಷ್ಟೆ ಅದರ ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿದೆ” ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
“ಈ ಹಿನ್ನೆಲೆಯಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 11ರ ಅನ್ವಯ ಪ್ರಕ್ರಿಯೆ ವಿಧಾನಗಳನ್ನು ಕೈಗೊಂಡ ನಂತರ, ಪ್ರತಿವಾದಿ ಕೋರಿರುವ ಮಾಹಿತಿಯನ್ನು ಒದಗಿಸುವಂತೆ ಆದೇಶ ನೀಡಬೇಕಿತ್ತು” ಎಂದು ನ್ಯಾ. ಸುಬ್ರಮಣಿಯಮ್ ಪ್ರಸಾದ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಎಪ್ರಿಲ್ 27, 2002ರಂದು ಮುಖ್ಯ ಮಾಹಿತಿ ಆಯುಕ್ತರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಪ್ರಾಧಿಕಾರವು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು.