ಬಿಜೆಪಿ ವಕ್ತಾರೆ ಪತ್ರಕರ್ತರನ್ನು ʼನಿಂದಿಸುತ್ತಿರುವʼ ವೀಡಿಯೋ ಪೋಸ್ಟ್ ಮಾಡಿದ್ದ ರಾಜದೀಪ್ ಸರ್ದೇಸಾಯಿಗೆ ದಿಲ್ಲಿ ಹೈಕೋರ್ಟ್ ತರಾಟೆ
“ನಿಮಗೆ ರೆಕಾರ್ಡ್ ಮಾಡುವ ಅಧಿಕಾರವಿಲ್ಲ” ಎಂದ ನ್ಯಾಯಾಲಯ ► ಸಾಮಾಜಿಕ ಜಾಲತಾಣಗಳಿಂದ ವೀಡಿಯೋ ತೆಗೆದುಹಾಕುವಂತೆ ಆದೇಶ

PC : X \ @barandbench
ಹೊಸದಿಲ್ಲಿ: ಎಕ್ಸ್ನಲ್ಲಿ ಪೋಸ್ಟ್ ಮಾಡಲಾದ ಬಿಜೆಪಿ ವಕ್ತಾರೆ ಶಾಝಿಯಾ ಇಲ್ಮಿ ಅವರು ಇಂಡಿಯಾ ಟುಡೇ ವೀಡಿಯೋ ಪತ್ರಕರ್ತರೊಬ್ಬರನ್ನು “ನಿಂದಿಸುತ್ತಿರುವ” ವೀಡಿಯೋವನ್ನು ತೆಗೆದುಹಾಕುವಂತೆ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ದಿಲ್ಲಿ ಹೈಕೋರ್ಟ್ ಇಂದು ಆದೇಶಿಸಿದೆ.
“ಈ ವೀಡಿಯೋ ರೆಕಾರ್ಡ್ ಮಾಡಲು ಮತ್ತು ಅದನ್ನು ಬಳಸಲು ನಿಮಗೆ ಯಾವುದೇ ಅಧಿಕಾರವಿಲ್ಲ,” ಎಂದು ನ್ಯಾಯಾಲಯ ಸರ್ದೇಸಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಶಾಝಿಯಾ ಇಲ್ಮಿ ಅವರು ಸರ್ದೇಸಾಯಿ, ಇಂಡಿಯಾ ಟುಡೇ ಮತ್ತು ಕೆಲ ಸಾಮಾಜಿಕ ಜಾಲತಾಣಗಳ ವಿರುದ್ಧ ದಾಖಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸಿ ಜಸ್ಟಿಸ್ ಮನ್ಮೀತ್ ಪ್ರೀತಂ ಸಿಂಗ್ ಮೇಲಿನ ಆದೇಶ ಹೊರಡಿಸಿದ್ದಾರೆ.
#Breaking
— Bar and Bench (@barandbench) August 13, 2024
"You had no authority to record and no authority to use."
Delhi High Court orders Rajdeep Sardesai to take down the video he uploaded on X (Twitter) accusing BJP's Shazia Ilmi of "abusing" an India Today video journalist.@shaziailmi @sardesairajdeep #Defamation pic.twitter.com/a2T9QODpwr
ಈ ಪ್ರಕರಣದಲ್ಲಿ ಮಧ್ಯಂತರ ಪರಿಹಾರ ಕೋರಿ ಇಲ್ಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವ ತನಕ ಇಂದಿನ ಆದೇಶ ಜಾರಿಯಲ್ಲಿರಲಿದೆ ಎಂದು ನ್ಯಾಯಾಲಯ ಹೇಳಿದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಈ ವಿಚಾರ ಕುರಿತಂತೆ ಕಳೆದ ವಾರ ಶಾಝಿಯಾ ಇಲ್ಮಿ ನ್ಯಾಯಾಲಯದ ಕದ ತಟ್ಟಿದ ನಂತರ ಆಗಸ್ಟ್ 9ರ ವಿಚಾರಣೆ ನಂತರ ನ್ಯಾಯಾಲಯವು ಈ ಸಂಬಂಧದ ಪೂರ್ಣ ಎಡಿಟ್ ಮಾಡಿಲ್ಲದ ವೀಡಿಯೋವನ್ನು ಆಗಸ್ಟ್ 12ರೊಳಗೆ ಒದಗಿಸುವಂತೆ ರಾಜದೀಪ್ ಸರ್ದೇಸಾಯಿ ಮತ್ತು ಇಂಡಿಯಾ ಟುಡೇಗೆ ಹೇಳಿತ್ತು.
ಜುಲೈ 28ರಂದು ಇಂಡಿಯಾ ಟುಡೇಯಲ್ಲಿ ಚರ್ಚಾ ಕಾರ್ಯಕ್ರಮವೊಂದರ ವೇಳೆ ಈ ಘಟನೆ ನಡೆದಿತ್ತು. ಅಗ್ನಿವೀರ್ ಯೋಜನೆಯ ನ್ಯೂನತೆಗಳನ್ನು ನಿವೃತ್ತ ಮೇಜರ್ ಜನರಲ್ ಯಶ್ ಮೋರ್ ವಿವರಿಸುತ್ತಿದ್ದಂತೆ ಶಾಝಿಯಾ ಮಧ್ಯಪ್ರವೇಶಿಸಲು ಯತ್ನಿಸಿದಾಗ ಸರ್ದೇಸಾಯಿ ಅವರು ಮಾತನಾಡಿ ಕಟು ವಾಸ್ತವಗಳನ್ನು ಯಶ್ ಮಂಡಿಸಿದ್ದಾರೆ ಎಂದು ಹೇಳಿದರು.
ಆಗ ಶಾಝಿಯಾ, “ಉಪದೇಶ ನೀಡಬೇಡಿ” ಎಂದು ಹೇಳಿದ ನಂತರ ಕಾವೇರಿದ ಚರ್ಚೆ ನಡೆದು ಶಾಝಿಯಾ ಶೋ ಬಿಟ್ಟು ಹೊರನಡೆದಿದ್ದರು.
ಅದೇ ರಾತ್ರಿ ಶಾಝಿಯಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ತಮ್ಮ ಮೈಕ್ ವಾಲ್ಯೂಮ್ ಅನ್ನು ಸರ್ದೇಸಾಯಿ ಕಡಿಮೆ ಮಾಡಿದ್ದರು ಎಂದು ಆರೋಪಿಸಿದ್ದರು.
ಮರುದಿನ ಬೆಳಿಗ್ಗೆ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ ಸರ್ದೇಸಾಯಿ, ಶಾಜಿಯಾ ಅವರು ಇಂಡಿಯಾ ವೀಡಿಯೋ ಟುಡೇ ಪತ್ರಕರ್ತರನ್ನು ನಿಂದಿಸಿದ್ದರು ಎಂದು ಆರೋಪಿಸಿದ್ದರು.