ನೀರವ್ ಮೋದಿಗೆ ಮತ್ತೆ ಸಂಕಷ್ಟ| ವಂಚನೆ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ನೆರವು ಕೋರಿದ ಬ್ರಿಟನ್ ನ್ಯಾಯಾಲಯ

ನೀರವ್ ಮೋದಿ PC: x.com/ani_digital
ಹೊಸದಿಲ್ಲಿ, ಜ. 19: ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ಹಾಗೂ ಅವರ ಕಂಪೆನಿಗಳ ವಿರುದ್ಧ ಸಿವಿಲ್ ಮೊಕದ್ದಮೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಲು ನೆರವು ನೀಡುವಂತೆ ಬ್ರಿಟನ್ ನ್ಯಾಯಾಲಯವೊಂದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ವಿನಂತಿಸಿದೆ.
ಬ್ರಿಟನ್ನ ಸರ್ವೋಚ್ಛ ನ್ಯಾಯಾಲಯದ ಕಿಂಗ್ಸ್ ಬೆಂಚ್ ವಿಭಾಗದ ಪರವಾಗಿ ಕೇಂದ್ರ ಕಾನೂನು ಸಚಿವಾಲಯದ ಮೂಲಕ ರವಾನಿಸಲಾದ ವಿನಂತಿಯನ್ನು ಪರಿಗಣಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಒಪ್ಪಿಕೊಂಡಿದೆ.
ವಂಚನೆಯ ಒಪ್ಪಂದ ಪತ್ರ ಸೇರಿದಂತೆ ಪಾವತಿಸದ ಸಾಲದ ಆರೋಪವನ್ನು ಪರಿಹರಿಸುವ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಫೈರ್ಸ್ಟಾರ್ ಡೈಮಂಡ್ ಎಫ್ಝಡ್ಝಿ, ಫೈರ್ಸ್ಟಾರ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ನೀರವ್ ಮೋದಿ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ಬ್ರಿಟನ್ನಲ್ಲಿ ಕ್ರಮ ಕೈಗೊಳ್ಳುತ್ತಿದೆ.
ನೀರವ್ ಮೋದಿ ನೇತೃತ್ವದ ಕಂಪೆನಿಗಳು ಸಾಲ ಮರು ಪಾವತಿಸಲು ವಿಫಲವಾಗಿವೆ ಎಂದು ಬ್ಯಾಂಕ್ ಆರೋಪಿಸಿದೆ. ಸಾಕ್ಷ್ಯಗಳ ಸಂಗ್ರಹಣಾ ಪ್ರಕ್ರಿಯೆಯ ಭಾಗವಾಗಿ ಈ ಪ್ರಕರಣದಲ್ಲಿ ಪ್ರಮುಖ ಪುರಾವೆ ನೀಡುವ ಸಾಕ್ಷಿಯನ್ನು ಬ್ರಿಟನ್ ನ್ಯಾಯಾಲಯ ಗುರುತಿಸಿದೆ.
ದಿಲ್ಲಿ ಮೂಲದ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಅನಿಮೇಶ್ ಬರುವಾ ಅವರು ಈ ಮೊಕದ್ದಮೆಯಲ್ಲಿ ಪ್ರಮುಖ ಸಾಕ್ಷಿಯ ಹೆಸರನ್ನು ಉಲ್ಲೇಖಿಸಿದೆ.
ಬರುವಾ ಅವರು ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವುದರಿಂದ ಬ್ರಿಟನ್ನ ವಿನಂತಿಯನ್ನು ಭಾರತೀಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಭಾರತದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿ ಬ್ರಿಟನ್ ನ್ಯಾಯಾಲಯಕ್ಕೆ ಕಳುಹಿಸಿವುದು ಗುರಿಯಾಗಿದೆ.







