ತಾಯಿಯ ಮೇಲೆಯೇ ಎರಡು ಬಾರಿ ಅತ್ಯಾಚಾರ; ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸುಮಾರು 65 ವರ್ಷದ ವೃದ್ಧೆ ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ ಆರೋಪದಲ್ಲಿ 39 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಹೌಝ್ ಖಾಝಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಲವು ವರ್ಷಗಳ ಹಿಂದೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ವಿಧಿಸುತ್ತಿರುವ ಶಿಕ್ಷೆ ಇದು ಎಂದು ಹೇಳಿ ಮಗ ಅತ್ಯಾಚಾರ ಎಸಗಿದ್ದಾಗಿ ವೃದ್ಧೆ ದೂರು ನೀಡಿದ್ದಾರೆ.
ವೃದ್ಧೆ ತನ್ನ 25 ವರ್ಷದ ಪುತ್ರಿಯ ಜತೆಗೆ ಪೊಲೀಸ್ ಠಾಣೆಗೆ ಆಗಮಿಸಿ ಶುಕ್ರವಾರ ದೂರು ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪುತ್ರ ಈ ಕೃತ್ಯ ಎಸಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.
ವೃದ್ಧೆ ತನ್ನ ನಿವೃತ್ತ ಉದ್ಯೋಗಿಯಾದ ಪತಿ ಹಾಗೂ ಆರೋಪಿ ಮಗ, ಪುತ್ರಿಯ ಜತೆ ವಾಸವಿದ್ದಾರೆ. ಇವರ ಮನೆ ಪಕ್ಕದಲ್ಲೇ ಹಿರಿಯ ಮಗಳು ತನ್ನ ಗಂಡನ ಮನೆಯಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 17ರಂದು ಮಹಿಳೆ, ಆಕೆಯ ಪತಿ ಹಾಗೂ ಕಿರಿಯ ಪುತ್ರಿ ಸೌದಿ ಅರೇಬಿಯಾಗೆ ಯಾತ್ರೆ ಹೋಗಿದ್ದರು. ಎಂಟು ದಿನಗಳ ಬಳಿಕ ಇನ್ನೂ ವಿದೇಶದಲ್ಲಿ ಇದ್ದಾಗಲೇ ಕರೆ ಮಾಡಿದ ಆರೋಪಿ, ವಾಪಸ್ಸಾಗುವಂತೆ ತಂದೆಗೆ ಸೂಚಿಸಿದ್ದ.
"ನನ್ನ ಪತಿ ನನಗೆ ವಿಚ್ಛೇದನ ನೀಡಬೇಕು ಎಂದು ಮಗ ಬಯಸಿದ್ದ. ಆತನ ತಂಗಿ ಹುಟ್ಟುವ ಮೊದಲು ಗಂಡ ಕೆಲಸಕ್ಕೆ ಹೋದಾಗ ನಾನು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದೆ ಎನ್ನುವುದನ್ನು ಪತ್ತೆ ಮಾಡಿದ್ದಾಗಿ ಹೇಳಿದ್ದ" ಎಂದು ವಿವರಿಸಲಾಗಿದೆ. ಪದೇ ಪದೇ ಮಗ ಇಂಥ ಕರೆ ಮಾಡುತ್ತಿದ್ದ. ಕುಟುಂಬ ಆಗಸ್ಟ್ 1ರಂದು ವಾಪಸ್ಸಾದ ತಕ್ಷಣ ಮಗ ಈ ಕೃತ್ಯ ಎಸಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.







