ಅತ್ಯಾಚಾರ ಪ್ರಕರಣದ ದೋಷಿ ಆಸಾರಾಂ ಫೋಟೊ ಒಳಗೊಂಡ ಜಾಹೀರಾತು: ವ್ಯಾಪಕ ಟೀಕೆಗೆ ಗುರಿಯಾದ ದಿಲ್ಲಿ ಮೆಟ್ರೋ

Photo credit: X/@The Legal Man
ಹೊಸದಿಲ್ಲಿ : ಅತ್ಯಾಚಾರ ಪ್ರಕರಣದ ಅಪರಾಧಿ ಸ್ವಘೋಷಿತ ದೇವಮಾನವ ಆಸಾರಾಂ ಫೋಟೊ ಒಳಗೊಂಡ ಜಾಹೀರಾತುಗಳು ದಿಲ್ಲಿ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದು, ಈ ಕುರಿತ ಫೋಟೊ ವೈರಲ್ ಆಗುತ್ತಿದ್ದಂತೆ ದಿಲ್ಲಿ ಮೆಟ್ರೋ ವ್ಯಾಪಕ ಟೀಕೆಗೆ ಒಳಗಾಗಿದೆ.
ಶಿಷ್ಯೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಒಳಗಾಗಿದ್ದ ಸ್ವಘೋಷಿತ ದೇವಮಾನವ ಆಸಾರಾಂ ಪೋಟೊ ಇರುವ "ಪೋಷಕರ ಆರಾಧನಾ ದಿನದ (Parents Worship Day)” ಕುರಿತ ದಿಲ್ಲಿ ಮೆಟ್ರೋದಲ್ಲಿದ್ದ ಜಾಹೀರಾತುಗಳನ್ನು ತೋರಿಸುವ ಎರಡು ಫೋಟೋಗಳನ್ನು ವಕೀಲರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ವಕೀಲರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯ ಫೋಟೊ ಇರುವ ಪೋಸ್ಟರ್ ಗಳಿಗೆ ದಿಲ್ಲಿ ಮೆಟ್ರೋದೊಳಗೆ ಹೇಗೆ ಅವಕಾಶ ನೀಡಲಾಗಿದೆ? ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪೋಸ್ಟ್ ಭಾರೀ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಜಾಹೀರಾತುಗಳಿಗೆ DMRC ಅನುಮೋದನೆ ನೀಡುವ ಕುರಿತ ನಿಯಮಾವಳಿಗಳನ್ನು ಮತ್ತು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಿಲ್ಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಪ್ರತಿಕ್ರಿಯಿಸಿದ್ದು, ಜಾಹೀರಾತುಗಳನ್ನು ತೆಗೆದುಹಾಕಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.







