ತಿಹಾರ್ ಜೈಲಿನಲ್ಲಿ ಜೀವಕ್ಕೆ ಅಪಾಯವಿದೆ ಎಂದ ಅತ್ಯಾಚಾರ ಆರೋಪಿ ಚೈತನ್ಯಾನಂದ ಸ್ವಾಮಿ; ವರದಿ ಕೇಳಿದ ದಿಲ್ಲಿ ನ್ಯಾಯಾಲಯ

ಚೈತನ್ಯಾನಂದ ಸರಸ್ವತಿ | Photo Credit: via ANI
ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಸ್ವಯಂಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಹೇಳಿಕೆ ನೀಡಿದ ಬಳಿಕ ಈ ಬಗ್ಗೆ ಯಥಾಸ್ಥಿತಿ ವರದಿ ಸಲ್ಲಿಸುವಂತೆ ದೆಹಲಿ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಥಮ ದರ್ಜೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಅನಿಮೇಶ್ ತ್ರಿಪಾಠಿ ಅವರೆದುರು ವಿಚಾರಣೆ ವೇಳೆ ಚೈತನ್ಯಾನಂದ ಸರಸ್ವತಿ ಈ ಹೇಳಿಕೆ ನೀಡಿ, ತಿಹಾರ್ ಜೈಲಿನ ಒಳಗೆ ತನ್ನ ಜೀವಕ್ಕೆ ಅಪಾಯವಿದ್ದು, ಕೋರ್ಟ್ ಸೂಚನೆಯ ಹೊರತಾಗಿಯೂ ಕೇಸರಿ ರಮಾಲು ಧರಿಸಲು ಮತ್ತು ಪಥ್ಯಾಹಾರ ಸೇವನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
"ಜೈಲಿನಲ್ಲಿ ಜೀವಕ್ಕೆ ಅಪಾಯವಿದೆ ಎಂದು ಆರೋಪಿ ಹೇಳಿಕೆ ಸಲ್ಲಿಸಿದ್ದು, ಜೈಲು ಅಧೀಕ್ಷಕರಿಗೆ ಮೂರು ಬಾರಿ ಮನವಿಗಳನ್ನು ಸಲ್ಲಿಸಿದರೂ ಕೇಸರಿ ವಸ್ತ್ರಧರಿಸಲು ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ" ಎಂದು ನ್ಯಾಯಾಧೀಶರು ಹೇಳಿದರು. ಈ ಹಿನ್ನೆಲೆಯಲ್ಲಿ ವಿವರವಾದ ಯಥಾಸ್ಥಿತಿ ವರದಿಯನ್ನು ಜೈಲು ಅಧಿಕಾರಿಗಳು ಮುಂದಿನ ವಿಚಾರಣೆ ನಡೆಯುವ ನ.18ರ ಒಳಗಾಗಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಕಳೆದ ವಾರ ಆರೋಪಿ ಪಾಟಿಯಾಲಾ ಹೌಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದು, ದಿಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವವರೆಗೆ ಕಾಯುವುದಾಗಿ ಆರೋಪಿ ಪರ ವಕೀಲರು ಹೇಳಿದ್ದರು.







