ಅಪರೇಶನ್ ಮಿಲಾಪ್ | ಕಾಣೆಯಾದ 75 ಮಂದಿಯನ್ನು ಒಂದೇ ತಿಂಗಳಲ್ಲಿ ಹುಡುಕಿಕೊಟ್ಟ ದಿಲ್ಲಿ ಪೊಲೀಸರು

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ನ.1: ‘ಅಪರೇಶನ್ ಮಿಲಾಪ್’ ಉಪಕ್ರಮದಡಿ ಅಕ್ಟೋಬರ್ ತಿಂಗಳಲ್ಲಿ ದಿಲ್ಲಿ ಪೊಲೀಸರು 28 ಮಂದಿ ಅಪಹೃತ ಮಕ್ಕಳು ಸೇರಿದಂತೆ 75 ಮಂದಿ ನಾಪತ್ತೆಯಾದ ವ್ಯಕ್ತಿಗಳನ್ನು ಅವರ ಕುಟುಂಬಗಳೊಂದಿಗೆ ಸೇರಿಸಿದ್ದಾರೆಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಪತ್ತೆಯಾದವರಲ್ಲಿ 28 ಮಂದಿ ಮಕ್ಕಳು ಹಾಗೂ 47 ವಯಸ್ಕರು ಒಳಗೊಂಡಿದ್ದಾರೆ. ಇವರೆಲ್ಲರೂ ಅಕ್ಟೋಬರ್ 1ರಿಂದ ಅಕ್ಟೋಬರ್ 31ರ ನಡುವೆ ಆಗ್ನೇಯ ದಿಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಪತ್ತೆಯಾದವರಾಗಿದ್ದಾರೆ.
ನಾಪತ್ತೆಯಾದ ಹಾಗೂ ಅಪಹೃತ ವ್ಯಕ್ತಿಗಳ ಕುರಿತ ವರದಿಗಳ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಿಸ್ತೃತವಾದ ಹಾಗೂ ಸಮನ್ವಯದ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಶೋಧತಂಡಗಳು ಸಿಸಿಟಿವಿಯ ದೃಶ್ಯಾವಳಿಗಳ ತಪಾಸಣೆಯನ್ನು ನಡೆಸಿತ್ತು. ನಾಪತ್ತೆಯಾದ ವ್ಯಕ್ತಿಗಳ ಛಾಯಾಚಿತ್ರಗಳನ್ನು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಆಟೋ ಹಾಗೂ ಇ-ರಿಕ್ಷಾ ನಿಲ್ದಾಣಗಳಲ್ಲಿ ಪ್ರಸಾರ ಮಾಡಿತ್ತು ಹಾಗೂ ಮನೆಮನೆಗಳಿಗೆ ತೆರಳಿ ವಿಚಾರಣೆಗಳನ್ನು ನಡೆಸಿತ್ತು. ನಾಪತ್ತೆಯಾದ ವ್ಯಕ್ತಿಗಳ ಕುರಿತ ಮಾಹಿತಿಗಳ ಬಗ್ಗೆ ಸುಳಿವು ಪಡೆಯಲು ಚಾಲಕರು, ಬಸ್ನಿರ್ವಾಹಕರು ಹಾಗೂ ಸ್ಥಳೀಯ ವ್ಯಾಪಾರಿಗಳನ್ನು ಪ್ರಶ್ನಿಸಿತ್ತು. ಸ್ಥಳೀಯ ಮಾಹಿತಿದಾರರನ್ನು ಕೂಡಾ ಈ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿತ್ತು. ಆಸುಪಾಸಿನ ಪೊಲೀಸ್ ಠಾಣೆಗಳು ಹಾಗೂ ಆಸ್ಪತ್ರೆಗಳಲ್ಲಿಯೂ ಪರಿಶೀಲನೆ ನಡೆಸಲಾಗಿತ್ತು’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಋತ್ಯ ದಿಲ್ಲಿ ಜಿಲ್ಲೆಯಲ್ಲಿ ವರ್ಷವಿಡೀ ನಡೆದ ಈ ಉಪಕ್ರಮಗಳಿಂದಾಗಿ ಉತ್ತೇಜನಕಾರಿಯಾದ ಫಲಿತಾಂಶಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 1ರಿಂದ ಅಕ್ಟೋಬರ್ 31ರಿಂದ, 366 ಮಕ್ಕಳು ಹಾಗೂ 748 ಮಂದಿ ವಯಸ್ಕರು ಸೇರಿದಂತೆ ಒಟ್ಟು 1,114 ಮಂದಿಯನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.







