ಅಮಾನ್ಯಗೊಂಡ ನೋಟು ಮಾರಾಟ ಜಾಲ ಭೇದಿಸಿದ ದಿಲ್ಲಿ ಪೊಲೀಸರು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.11: ನಗರದ ವಝೀರ್ಪುರ ಪ್ರದೇಶದಲ್ಲಿ ಅಮಾನ್ಯಗೊಂಡ ಕರೆನ್ಸಿನೋಟುಗಳ ಮಾರಾಟ ನಡೆಸುತ್ತಿದ್ದ ಅಕ್ರಮ ಜಾಲವೊಂದನ್ನು ದಿಲ್ಲಿ ಪೊಲೀಸರು ಗುರುವಾರ ಭೇದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಒಟ್ಟು 3.5 ಕೋಟಿ ರೂ.ಮುಖಬೆಲೆ ಮೌಲ್ಯದ 500 ರೂ. ಹಾಗೂ 1 ಸಾವಿರ ರೂ. ಗಳ ನೋಟುಗಳನ್ನು ತುಂಬಿಸಿಟ್ಟಿದ್ದ ಹಲವಾರು ಬ್ಯಾಗ್ಗಳನ್ನು ವಶಪಡಿಸಿಕೊಂಡಿದ್ದಾರೆ. 2016ರ ನವೆಂಬರ್ನಲ್ಲಿ ಅಮಾನ್ಯೀಕರಣದ ಬಳಿಕ ಈ ನೋಟುಗಳು ಅಸಿಂಧುಗೊಂಡಿದ್ದರೂ, ಅವು ಈಗಲೂ ರಹಸ್ಯವಾಗಿ ಚಲಾವಣೆಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾನ್ಯಗೊಂಡ ಕರೆನ್ಸಿಗಳನ್ನು ಹೊಂದುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದರೂ, ಆರೋಪಿಗಳು ದಿಢೀರ್ ಹಣ ಸಂಪಾದಿಸಲು ಈ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಅಮಾನ್ಯಗೊಂಡ ನೋಟುಗಳನ್ನು ಆರೋಪಿಗಳು ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು.
ಈ ನೋಟುಗಳನ್ನು ಆರ್ಬಿಐ ಅಥವಾ ಕೆಲವು ನಿರ್ದಿಷ್ಟ ವಾಹಿನಿಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದೆಂದು ಸುಳ್ಳು ಆಶ್ವಾಸನೆಯನ್ನು ನೀಡಿ ಆರೋಪಿಗಳು ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ದಿಲ್ಲಿ ನಿವಾಸಿಗಳಾದ ಹರ್ಷ್, ಟೀಕ್ಚಂದ್, ಲಕ್ಷ್ಯ ಎಂದುಗುರುತಿಸಲಾಗಿದೆ.ನಾಲ್ಕನೇ ಆರೋಪಿ ವಿಪಿನ್ ಕುಮಾರ್ ಹಿಮಾಚಲ ಪ್ರದೇಶದ ಜೋಗಿಂದರ್ ನಗರದ ನಿವಾಸಿಯಾಗಿದ್ದು, ಆತ ಶಾಲಿಮಾರ್ಭಾಗ್ ನಗರದ ಮೆಟ್ರೋ ನಿಲ್ದಾಣದ ಸಮೀಪದ ಮನೆಯೊಂದರಲ್ಲಿ ನೆಲೆಸಿದ್ದನು. ಈ ಜಾಲವು ವಿವಿಧ ಸ್ಥಳಗಳಲ್ಲಿ ಹರಡಿರುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ನಿರ್ದಿಷ್ಟಪಡಿಸಲಾದ ಬ್ಯಾಂಕ್ ನೋಟುಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಹಾಗೂ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿದೆ.







