ಮೊಬೈಲ್ ಲೊಕೇಶನ್ ಟ್ರ್ಯಾಕಿಂಗ್ ತಂದ ಎಡವಟ್ಟು; ಆರೋಪಿಯನ್ನು ಹುಡುಕುತ್ತಾ ಪತ್ರಕರ್ತನ ಬಳಿ ತಲುಪಿದ ಪೊಲೀಸರು!
ತಪ್ಪಿನ ಅರಿವಾದ ಬಳಿಕ ದಿಲ್ಲಿ ಪೊಲೀಸರಿಂದ ಕ್ಷಮೆಯಾಚನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ನೋಯ್ಡಾ ಮೂಲದ ಪತ್ರಕರ್ತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಶಂಕಿತ ಎಂದು ತಪ್ಪಾಗಿ ಗುರುತಿಸಿದ್ದಕ್ಕಾಗಿ ದಿಲ್ಲಿ ಪೊಲೀಸರು ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಿಲ್ಲಿಯ ಹೊರವಲಯದ ಪ್ರೇಮ್ ನಗರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್ ಅವರನ್ನು ಒಳಗೊಂಡ ತಂಡವು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) (ಮೌಲ್ಯಯುತ ಭದ್ರತೆಯನ್ನು ಒಳಗೊಂಡ ವಂಚನೆ) ಮತ್ತು 61(2) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.
"ಬಹದ್ದೂರ್ಗಢ ನಿವಾಸಿ ರಾಹುಲ್ ಎಂದು ಗುರುತಿಸಲಾದ ಆರೋಪಿಯ ಲೊಕೇಶನ್ ಅನ್ನು ಮೊಬೈಲ್ ಫೋನ್ ಮೂಲಕ ಪೊಲೀಸರು ಪತ್ತೆ ಹಚ್ಚುತ್ತಾ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಪ್ರಶಾಂತ್ ಗೌತಮ್ ಹೇಳಿದರು.
ಆರೋಪಿಗಾಗಿ ಹುಡುಕಾಟ ನಡೆಸುತ್ತಾ ಪೊಲೀಸರು ನೋಯ್ಡಾದ ಸೆಕ್ಟರ್ 38 ರಲ್ಲಿರುವ ಪೆಟ್ರೋಲ್ ಪಂಪ್ ಗೆ ತಲುಪಿದರು. ಅಲ್ಲಿ ಅವರು ತನ್ನ ಹೆಂಡತಿಯೊಂದಿಗೆ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಿದರು. ಅವರನ್ನು ವಿಚಾರಿಸಿದಾಗ ಆ ಮಾಹಿತಿಯು ಪೊಲೀಸರು ಹುಡುಕುತ್ತಿದ್ದ ಆರೋಪಿಯ ವಿವರಕ್ಕೆ ತಾಳೆಯಾಯಿತು ಎಂದು ಡಿಸಿಪಿ ಹೇಳಿದರು.
ಪೊಲೀಸರು ಐಡೆಂಟಿಟಿ ಕಾರ್ಡ್ ಕೇಳಿದಾಗ ಕಾರಿನಲ್ಲಿದ್ದ ವ್ಯಕ್ತಿಯು ನಿರಾಕರಿಸಿ ಜಗಳವಾಡಿದರು ಎಂದು ತಿಳಿದುಬಂದಿದೆ. ನಂತರ ಆ ವ್ಯಕ್ತಿಯು ತನ್ನನ್ನು ನೋಯ್ಡಾ ಮೂಲದ ಪತ್ರಕರ್ತ ರಾಹುಲ್ ಶಾ ಎಂದು ಪರಿಚಯಿಸಿಕೊಂಡರು ಎಂದು ಡಿಸಿಪಿ ವಿವರಿಸಿದರು.
ತಮ್ಮ ತಪ್ಪನ್ನು ಅರಿತು ಕೊಂಡ ಪೊಲೀಸ್ ತಂಡವು ತಕ್ಷಣವೇ ಕ್ಷಮೆಯಾಚಿಸಿ ಅಲ್ಲಿಂದ ಠಾಣೆಗೆ ಹಿಂದಿರುಗಿತು. ಘಟನೆಯ ಸಂಬಂಧ ಯಾವುದೇ ಅನುಚಿತ ವರ್ತನೆ ಅಥವಾ ಬಲಪ್ರಯೋಗ ಮಾಡಲಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಆ ವ್ಯಕ್ತಿಯ ಮುಖಭಾವ ಮತ್ತು ಆರೋಪಿಯ ಹೆಸರಿನ ಜೊತೆ ಹೋಲಿಕೆಯಾಗಿದ್ದೆ ಗೊಂದಲಕ್ಕೆ ಕಾರಣವಾಗಿತ್ತು ಎಂದು ಡಿಸಿಪಿ ಹೇಳಿದ್ದಾರೆ. ಪತ್ರಕರ್ತನಾಗಿದ್ದ ಆ ವ್ಯಕ್ತಿಯು ಆರೋಪಿಯಲ್ಲ ಎಂದು ದೃಢಪಡಿಸಿದ ತಕ್ಷಣ ಪೊಲೀಸರು ಕ್ಷಮೆ ಕೇಳಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲಿಂದ ಹಿಂದಿರುಗಿದ್ದಾರೆ ಎಂದು ಅವರು ಹೇಳಿದರು.
ಘಟನೆಯ ಕುರಿತು ಆಂತರಿಕವಾಗಿ ವಿಚಾರಣೆ ನಡೆಸಲಾಗಿದೆ. ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎನ್ನಲಾಗಿದೆ.







