ಹೊಸದಿಲ್ಲಿ ರೈಲುನಿಲ್ದಾಣದಲ್ಲಿ ಕಾಲ್ತುಳಿತ | ಕೈಗಾಡಿಗಳಲ್ಲಿ ಮೃತದೇಹಗಳನ್ನು ಸಾಗಿಸಿದೆವು: ಘಟನೆಯ ಭೀಕರತೆ ಬಣ್ಣಿಸಿದ ಪೋರ್ಟರ್ ಗಳು

PC : PTI
ಹೊಸದಿಲ್ಲಿ: ಶನಿವಾರ ರಾತ್ರಿ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ 18 ಜೀವಗಳನ್ನು ಬಲಿ ತೆಗೆದುಕೊಂಡ ಕಾಲ್ತುಳಿತ ಘಟನೆಯ ಭೀಕರ ಅನುಭವವನ್ನು ಮೆಲುಕು ಹಾಕಿರುವ ಪೋರ್ಟರ್ ಗಳು ಗದ್ದಲದ ನಡುವೆಯೇ ಕೈಗಾಡಿಗಳಲ್ಲಿ ತಾವು ಮೃತದೇಹಗಳನ್ನು ಸಾಗಿಸಿದ್ದೆವು ಎಂದು ಹೇಳಿದ್ದಾರೆ.
‘ಪ್ರಯಾಗರಾಜ್ ಗೆ ತೆರಳಲಿದ್ದ ರೈಲು ಪ್ಲ್ಯಾಟ್ ಫಾರ್ಮ್ಗೆ ಆಗಮಿಸಿದಾಗ ಜನದಟ್ಟಣೆ ಏಕಾಏಕಿ ಹೆಚ್ಚಾಗಿತ್ತು. ಕಾಲ್ಸೇತುವೆಯ ಮೇಲೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದು, ಹಲವರಿಗೆ ಉಸಿರುಗಟ್ಟಿತ್ತು. ಸ್ಥಳದಲ್ಲಿಯೇ 10-15 ಜನರು ಮೃತಪಟ್ಟಿದ್ದರು. ನಾನು ಇಡೀ ಘಟನೆಗೆ ಸಾಕ್ಷಿಯಾಗಿದ್ದೆ. ನಾವು ಕೈಗಾಡಿಗಳಲ್ಲಿ ಮೃತದೇಹಗಳನ್ನು ಪ್ಲ್ಯಾಟ್ ಫಾರ್ಮ್ 14 ಮತ್ತು 15ರಿಂದ ಆ್ಯಂಬುಲೆನ್ಸ್ ಗೆ ಸಾಗಿಸಿದ್ದೆವು ’ಎಂದು ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಪೋರ್ಟ)ರ್ ಆಗಿರುವ ಕೃಷ್ಣಕುಮಾರ್ ಜೋಗಿ ತಿಳಿಸಿದರು.
‘ಪೋರ್ಟರ್ ಆಗಿ ನನ್ನ 15 ವರ್ಷಗಳ ಅನುಭವದಲ್ಲಿ ಇಷ್ಟೊಂದು ಬೃಹತ್ ದಟ್ಟಣೆಯನ್ನು ನಾನೆಂದಿಗೂ ನೋಡಿಲಿಲ್ಲ’ ಎಂದು ಪೋರ್ಟರ್ ಬಲರಾಮ ಹೇಳಿದರು.
‘ಜನರ ಶೂಗಳು, ಚಪ್ಪಲಿಗಳು ಮತ್ತು ಇತರ ಸೊತ್ತುಗಳು ಎಲ್ಲ ಕಡೆಗೂ ಹರಡಿ ಬಿದ್ದಿದ್ದವು. ನೂಕುನುಗ್ಗಲಿನ ನಡುವೆಯೇ ಹಲವು ಮಕ್ಕಳನ್ನು ಮತ್ತು ವೃದ್ಧರನ್ನು ನಾವು ಹೊರಗೆಳೆದಿದ್ದೆವು’ ಎಂದು ಇನ್ನೋರ್ವ ಪೋರ್ಟರ್ ತಿಳಿಸಿದರು.
► ರವಿವಾರವೂ ಹೆಚ್ಚಿನ ಜನಸಂದಣಿ
ರವಿವಾರ ಬೆಳಿಗ್ಗೆ 10:45 ಮತ್ತು 11:30ರ ನಡುವೆ ಪ್ರಯಾಗರಾಜ್ ಮತ್ತು ಇತರ ಸ್ಥಳಗಳಿಂದ ರೈಲುಗಳ ಆಗಮನದಿಂದ ಪ್ಲ್ಯಾಟ್ ಫಾರ್ಮ್ 14 ಮತ್ತು 15ರಲ್ಲಿ ಮತ್ತೆ ಜನದಟ್ಟಣೆಯುಂಟಾಗಿದ್ದು, ಪ್ರಯಾಣಿಕರು ನಿಲ್ದಾಣದಿಂದ ಹೊರಹೋಗಲು ಪರದಾಡುವಂತಾಗಿತ್ತು.
ಮಹಾ ಕುಂಭಮೇಳದಲ್ಲಿ ಜನದಟ್ಟಣೆಯನ್ನು ಉತ್ತಮವಾಗಿ ನಿರ್ವಹಿಸಲಾಗಿದ್ದರೂ, ರೈಲುಗಳು ಮತ್ತು ನಿಲ್ದಾಣಗಳಲ್ಲಿಯ ಪರಿಸ್ಥಿತಿಗಳು ಅಸಹನೀಯವಾಗಿದ್ದವು ಎಂದು ದಿಲ್ಲಿಗೆ ಮರಳಿದ ಹಲವು ಯಾತ್ರಿಗಳು ತಿಳಿಸಿದರು.
‘ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡುವಾಗ ನಮಗೆ ಯಾವುದೇ ತೊಂದರೆ ಎದುರಾಗಿರಲಿಲ್ಲ. ಆದರೆ ರೈಲುಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ವೃದ್ಧರಿಗೆ ಟಾಯ್ಲೆಟ್ ಗೆ ಹೋಗುವುದೂ ಕಷ್ಟವಾಗಿತ್ತು’ ಎಂದು ಪ್ರಯಾಗರಾಜ್ನಿಂದ ಮರಳಿದ ಯಾತ್ರಿಯೋರ್ವರು ತಿಳಿಸಿದರು.
ಕಾಲ್ತುಳಿತ ಬಗ್ಗೆ ಚರ್ಚಿಸಲು ದಿಲ್ಲಿ ಪೋಲಿಸ್ ಆಯುಕ್ತ ಸಂಜಯ ಅರೋರಾ ಅವರು ರವಿವಾರ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿಯ ಆರ್ ಪಿ ಎಫ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ ದುರಂತದ ಬಳಿಕವೂ ಹೆಚ್ಚಿನ ಆರ್ ಪಿ ಎಫ್ ಸಿಬ್ಬಂದಿಗಳನ್ನು ನಿಯೋಜಿಸಿರಲಿಲ್ಲ. ರವಿವಾರ ಅಪರಾಹ್ನ ಕೇವಲ ಇಬ್ಬರು ಆರ್ ಪಿ ಎಫ್ ಅಧಿಕಾರಿಗಳು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಪರದಾಡುತ್ತಿದ್ದುದು ಕಂಡುಬಂದಿತ್ತು.