ದಿಲ್ಲಿ ಗಲಭೆ ಪ್ರಕರಣ | ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ರ ಜಾಮೀನು ವಿಚಾರಣೆ ಮುಂದೂಡಿಕೆ

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ (Photo: PTI)
ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆಯ ಸಂಚು ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಹಾಗೂ ಮೀರನ್ ಹೈದರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಮನಮೋಹನ್ ಅವರಿದ್ದ ಪೀಠವು ಶುಕ್ರವಾರ ಈ ಸಂಬಂಧ ವಿಚಾರಣೆ ನಡೆಸಿ ಮುಂದೂಡಿಕೆ ಘೋಷಿಸಿತು. ಇದಕ್ಕೂ ಮುನ್ನ, ಸೆಪ್ಟೆಂಬರ್ 2ರಂದು ದಿಲ್ಲಿ ಹೈಕೋರ್ಟ್ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರತಿಭಟನೆ ನಡೆಸುವುದು ಸಂವಿಧಾನಾತ್ಮಕ ಹಕ್ಕು, ಆದರೆ ಅದರ ಹೆಸರಿನಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಜೊತೆಗೆ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಮುಹಮ್ಮದ್ ಸಲೀಮ್ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಅಬ್ದುಲ್ ಖಾಲಿದ್ ಸೈಫಿ ಮತ್ತು ಶಾದಾಬ್ ಅಹ್ಮದ್ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿತ್ತು. ಮತ್ತೊಬ್ಬ ಆರೋಪಿ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು.
ಹೈಕೋರ್ಟ್ ತನ್ನ ಆದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿದೆ ಎಂದು ತಿಳಿಸಿದರೂ, ಅದು ಸಂಪೂರ್ಣ ಹಕ್ಕು ಅಲ್ಲ, ನಿರ್ಬಂಧಗಳಿಗೆ ಒಳಪಟ್ಟಿರಬೇಕು ಎಂದು ಅಭಿಪ್ರಾಯಪಟ್ಟಿತ್ತು. ಅನಿಯಂತ್ರಿತ ಪ್ರತಿಭಟನೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ ಎಂದೂ ನ್ಯಾಯಾಲಯ ಸೂಚಿಸಿತ್ತು.
2020ರ ಗಲಭೆಯಲ್ಲಿ 53 ಮಂದಿ ಮೃತಪಟ್ಟು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿತ್ತು.
ಆರೋಪಿಗಳು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, 2020ರಿಂದ ಜೈಲಿನಲ್ಲಿದ್ದಾರೆ. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಬಳಿಕ ಅವರು ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.







