ದಿಲ್ಲಿಯಲ್ಲಿ ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ಕಡ್ಡಾಯ; ಎಲ್ಲ ಶಾಲೆಗಳಿಗೂ ಏಕರೂಪ ನಿಯಮ ಜಾರಿ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ: “ಸರಕಾರಿ, ಅನುದಾದಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸು ಆರು ವರ್ಷ ಮೀರಿರಬೇಕು. ಈ ನಿಯಮ 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ” ಎಂದು ದಿಲ್ಲಿ ಸರಕಾರದ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನ್ವಯ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಇಲಾಖೆ ಹೇಳಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ತನ್ನ ಆದೇಶದಲ್ಲಿ ನರ್ಸರಿ ಹಂತವನ್ನೂ ಒಳಗೊಂಡಂತೆ ಎಲ್ಲ ತರಗತಿಗಳಿಗೂ ಕನಿಷ್ಠ ವಯೋಮಿತಿಯನ್ನು ನಿಗದಿಗೊಳಿಸಿದೆ. ನರ್ಸರಿ ಮತ್ತು ಕಿಂಡರ್ ಗಾರ್ಟನ್ ನಂತರದ ಹಂತ ಒಂದನೆ ತರಗತಿಯಾಗಿದೆ. ಈ ತರಗತಿಗಳ ಪೈಕಿ ಎಲ್ಕೆಜಿಗೆ 4 ವರ್ಷ ಮೇಲ್ಪಟ್ಟು ಹಾಗೂ ಯುಕೆಜಿಗೆ 5 ವರ್ಷ ಮೇಲ್ಪಟ್ಟ ಮಗುವನ್ನು ದಾಖಲಿಸಬೇಕು.
ಪರಿಷ್ಕೃತ ಪಟ್ಟಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನೂ (ಮಾರ್ಚ್ 31ಕ್ಕೆ ಅನ್ವಯವಾಗುವಂತೆ) ಉಲ್ಲೇಖಿಸಲಾಗಿದೆ. ನರ್ಸರಿಗೆ (ಬಾಲವಾಟಿಕ 1/ಶಾಲಾಪೂರ್ವ 1) ಕನಿಷ್ಠ ಮೂರು ವರ್ಷ ಹಾಗೂ ಗರಿಷ್ಠ ನಾಲ್ಕು ವರ್ಷ ಆಗಿರಬೇಕು. ಎಲ್ಕೆಜಿ (ಬಾಲವಾಟಿಕಾ 2/ಶಾಲಾ ಪೂರ್ವ 2) ನಾಲ್ಕು ವರ್ಷದಿಂದ ಐದು ವರ್ಷ ಆಗಿರಬೇಕು. ಯುಕೆಜಿ (ಬಾಲವಾಟಿಕಾ 3/ಶಾಲಾ ಪೂರ್ವ 3) 5 ವರ್ಷದಿಂದ 6 ವರ್ಷದೊಳಗೆ ಆಗಿರಬೇಕು. ನಂತರ, ಒಂದನೆ ತರಗತಿಗೆ ದಾಖಲಾಗಲು ಕನಿಷ್ಠ 6 ವರ್ಷದಿಂದ ಗರಿಷ್ಠ 7 ವರ್ಷ ವಯಸ್ಸಾಗಿರಬೇಕು ಎಂದು ಹೇಳಲಾಗಿದೆ.







