ದಿಲ್ಲಿ ಕಾಲ್ತುಳಿತ ಪ್ರಕರಣ | 60 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿರೀಕ್ಷಣಾ ಪ್ರದೇಶ ನಿರ್ಮಾಣ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಅಚಾತುರ್ಯ ಘಟನೆಗಳನ್ನು ತಪ್ಪಿಸಲು ಜನದಟ್ಟಣೆ ನಿಯಂತ್ರಣ ಕೈಪಿಡಿ ಜಾರಿ

ಅಶ್ವಿನಿ ವೈಷ್ಣವ್ | PTI
ಹೊಸದಿಲ್ಲಿ: ಭವಿಷ್ಯದ ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕಾಲ್ತುಳಿತ ಘಟನೆಗಳು ನಡೆಯುವುದನ್ನು ತಪ್ಪಿಸಲು 60 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿರೀಕ್ಷಣಾ ಪ್ರದೇಶ, ಪ್ರಯಾಣಿಕರು ಮೆಟ್ಟಿಲುಗಳು ಹಾಗೂ ಸೇತುವೆಗಳ ಮೇಲೆ ಕೂರುವುದಕ್ಕೆ ನಿಷೇಧ ಹಾಗೂ ಪ್ರತ್ಯೇಕ ಜನದಟ್ಟಣೆ ನಿರ್ವಹಣೆ ಕೈಪಿಡಿ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸುವುದಾಗಿ ಸೋಮವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದರು.
ಶನಿವಾರ ಸಂಜೆ ಹೊಸ ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡ ಘಟನೆ ಜರುಗಿದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಬೆಂಗಳೂರು, ಹೊಸ ದಿಲ್ಲಿ, ಪಾಟ್ನಾ, ಸೂರತ್ ಹಾಗೂ ಕೊಯಂಬತ್ತೂರು ಸೇರಿದಂತೆ 60 ರೈಲ್ವೆ ನಿಲ್ದಾಣಗಳಲ್ಲಿ ಅಧಿಕ ಜನದಟ್ಟಣೆಯಾಗುವುದನ್ನು ಗುರುತಿಸಲಾಗಿದ್ದು, ಪ್ರಯಾಣಿಕರು ನಿಲ್ದಾಣದೊಳಗೆ ಪ್ರವೇಶಿಸುವುದನ್ನು ನಿಯಂತ್ರಿಸಲು ಅಂಕಣದ ಹೊರಗೆ ಖಾಯಂ ಅಥವಾ ತಾತ್ಕಾಲಿಕ ನಿರೀಕ್ಷಣಾ ಪ್ರದೇಶಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ಅಶ್ವಿನಿ ವೈಷ್ಣವ್ ತಿಳಿಸಿದರು.
ಪ್ರಯಾಣಿಕರು ನಿಲ್ದಾಣಕ್ಕೆ ಬಂದಾಗ, ಅವರ ರೈಲು ನಿರ್ಗಮಿಸುವ ಸಮಯಕ್ಕೆ ಅನುಗುಣವಾಗಿ ಅವರಿಗೆ ಅಂಕಣವನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದು. ಇದರಿಂದ, ನಿಲ್ದಾಣ ಪ್ರದೇಶಗಳಲ್ಲಿ ಜನಜಂಗುಳಿ ನಿರ್ಮಾಣವಾಗುವುದಿಲ್ಲ. ಯಾವ ಪ್ರಯಾಣಿಕರ ರೈಲುಗಳು ನಿರ್ಗಮಿಸುವುದು ತಡವಾಗಿರುತ್ತದೊ, ಅಂಥ ಪ್ರಯಾಣಿಕರನ್ನು ನಿರೀಕ್ಷಣಾ ಪ್ರದೇಶದಲ್ಲಿ ಕೂರಿಸಲಾಗುತ್ತದೆ. ಇಂತಹುದೇ ಪ್ರಯೋಗವನ್ನು ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲೂ ಮಾಡಲಾಗಿದೆ ಎಂದು ಅವರು ಹೇಳಿದರು.
ಚಾಲ್ತಿಯಲ್ಲಿರುವ ಎಲ್ಲ ನಿಯಮಗಳನ್ನೂ ಒಗ್ಗೂಡಿಸಿ, ಪ್ರತ್ಯೇಕ ಜನದಟ್ಟಣೆ ನಿರ್ವಹಣೆ ಕೈಪಿಡಿಯನ್ನು ತಯಾರಿಸಲಾಗುವುದು. ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಅನುಸರಿಸಲಾಗುವುದು ಎಂದೂ ಅವರು ತಿಳಿಸಿದರು.
ಇತರ ಪ್ರಯಾಣಿಕರ ಸುಗಮ ಓಡಾಟವನ್ನು ಖಾತರಿಪಡಿಸಲು ಪ್ರಯಾಣಿಕರು ಮೆಟ್ಟಿಲುಗಳು ಹಾಗೂ ಸೇತುವೆಗಳ ಮೇಲೆ ಕುಳಿತುಕೊಳ್ಳದಂತೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಪ್ರಕಟನೆ ಹೊರಡಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ತಮ್ಮ ಸೌಕರ್ಯಗಳು ಹಾಗೂ ಜನದಟ್ಟಣೆ ನಿರ್ವಹಣೆಯನ್ನು ಸುಧಾರಿಸಲು ಪ್ರಯಾಣಿಕರು, ನಿಲ್ದಾಣದಲ್ಲಿನ ವರ್ತಕರು ಹಾಗೂ ಅಂಕಣಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದೂ ಅವರು ಹೇಳಿದರು.
ವಿಚಾರಣಾ ಸಮಿತಿ ಯಾವಾಗ ತನ್ನ ವರದಿ ಸಲ್ಲಿಸುತ್ತದೆ ಹಾಗೂ ಶನಿವಾರದ ಕಾಲ್ತುಳಿತಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ವಿಚಾರಣಾ ವರದಿ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳುವುದು ನೈಸರ್ಗಿಕ ನ್ಯಾಯ ತತ್ವಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಉತ್ತರಿಸಿದರು. ಇದೇ ವೇಳೆ, ಸಮಿತಿಯ ಸದಸ್ಯರಿಗೆ ಅನಗತ್ಯ ಒತ್ತಡ ಉಂಟಾಗುವುದರಿಂದ, ವರದಿ ಸಲ್ಲಿಕೆಗೆ ಯಾವುದೇ ಕಾಲಮಿತಿಯನ್ನು ನಿಗದಿಗೊಳಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.







