ದಿಲ್ಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ | ಪ್ರಮುಖ ಆರೋಪಿಯ ಶಂಕಿತ ಸಹಚರನನ್ನು ಬಂಧಿಸಿದ NIA

Photo Credit : NDTV
ಹೊಸದಿಲ್ಲಿ: ದಿಲ್ಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ನಡೆಸುವ ಪಿತೂರಿ ನಡೆಸಿದ ಆರೋಪದ ಮೇಲೆ ಕಾಶ್ಮೀರ ನಿವಾಸಿಯೊಬ್ಬನನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ನ. 10ರಂದು ನಡೆದಿದ್ದ ಈ ಸ್ಫೋಟದಲ್ಲಿ 10 ಮಂದಿ ಮೃತಪಟ್ಟು, 32 ಮಂದಿ ಗಾಯಗೊಂಡಿದ್ದರು.
“ದಿಲ್ಲಿ ಪೊಲೀಸರಿಂದ ಪ್ರಕರಣದ ಹಸ್ತಾಂತರವಾದ ಬಳಿಕ, ವ್ಯಾಪಕ ಶೋಧ ಕಾರ್ಯ ನಡೆಸಿದ ರಾಷ್ಟ್ರೀಯ ತನಿಖಾ ದಳವು, ಸ್ಫೋಟದಲ್ಲಿ ಭಾಗಿಯಾಗಿದ್ದ ಕಾರು ನೋಂದಣಿಗೊಂಡಿದ್ದ ಅಮೀರ್ ರಶೀದ್ ಅಲಿ ಎಂಬ ವ್ಯಕ್ತಿಯನ್ನು ದಿಲ್ಲಿಯಲ್ಲಿ ಬಂಧಿಸಿದೆ” ಎಂದು ರವಿವಾರ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
“ಭಯೋತ್ಪಾದಕ ದಾಳಿಯನ್ನು ನಡೆಸಲು ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿಯೊಂದಿಗೆ ಪ್ಯಾಂಪೋರ್ ನ ಸಂಬೂರ ನಿವಾಸಿಯಾದ ಆರೋಪಿಯು ಪಿತೂರಿ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ” ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
“ಸ್ಫೋಟಕ್ಕೆ ಕಾರಣವಾಗಿದ್ದ ಸುಧಾರಿತ ಸ್ಫೋಟಕ ಸಾಧನ ಹೊಂದಿದ್ದ ಕಾರಿನ ಖರೀದಿಗೆ ನೆರವು ನೀಡಲು ಅಮೀರ್ ದಿಲ್ಲಿಗೆ ಬಂದಿದ್ದ. ಸುಧಾರಿತ ಸ್ಫೋಟಕ ಸಾಧನ ಹೊಂದಿದ್ದ ಕಾರಿನ ಚಾಲಕನ ಗುರುತನ್ನು ಉಮರ್ ಉನ್ ನಬಿ ಎಂದು ವಿಧಿ ವಿಜ್ಞಾನ ಪರೀಕ್ಷೆಗಳ ಮೂಲಕ ರಾಷ್ಟ್ರೀಯ ತನಿಖಾ ತಂಡ ಪತ್ತೆ ಹಚ್ಚಿದೆ. ಆತ ಹರ್ಯಾಣದ ಫರೀದಾಬಾದ್ ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಾಮಾನ್ಯ ಔಷಧ ವಿಭಾಗದ ಸಹಾಯಕ ಪ್ರಾಧ್ಯಾ ಪಕ ಮತ್ತು ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದಾನೆ” ಎಂದು ಅದು ತಿಳಿಸಿದೆ.
ದಿಲ್ಲಿ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ ಹಾಗೂ ಉತ್ತರ ಪ್ರದೇಶ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ತನಿಖಾ ದಳ, ಹಲವು ರಾಜ್ಯಗಳಲ್ಲಿ ತನ್ನ ತನಿಖೆ ಮುಂದುವರಿಸಿದೆ. “ಇದು ಸ್ಫೋಟದ ಹಿಂದೆ ದೊಡ್ಡ ಪಿತೂರಿ ನಡೆದಿರುವುದನ್ನು ಬಯಲು ಮಾಡಲು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ಹಲವು ಸುಳಿವನ್ನು ನೀಡಿದೆ” ಎಂದು ರಾಷ್ಟ್ರೀಯ ತನಿಖಾ ತಂಡ ಹೇಳಿದೆ







