ಇಸ್ಲಾಂ, ಪಾಕ್, ಚೀನಾ ಕುರಿತ ಸ್ನಾತಕೋತ್ತರ ಪಠ್ಯಗಳನ್ನು ಕೈಬಿಡುವ ದಿಲ್ಲಿ ವಿವಿ ಸಮಿತಿ ನಿರ್ಧಾರಕ್ಕೆ ಸದಸ್ಯರ ವಿರೋಧ

ದಿಲ್ಲಿ ವಿಶ್ವವಿದ್ಯಾನಿಲಯ | PC : PTI
ಹೊಸದಿಲ್ಲಿ: ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ಇಸ್ಲಾಂ ಧರ್ಮ, ಪಾಕಿಸ್ತಾನ ಹಾಗೂ ಚೀನಾ ಕುರಿತಾದ ಪಠ್ಯಗಳನ್ನು ಕೈಬಿಡುವ ದಿಲ್ಲಿ ವಿಶ್ವವಿದ್ಯಾನಿಲಯ ಸಮಿತಿಯ ನಿರ್ಧಾರವು ಸದಸ್ಯರಿಂದ ಸಹಮತವನ್ನು ಪಡೆಯುವಲ್ಲಿ ವಿಫಲವಾಗಿದೆ. ಸಮಿತಿಯ ನಿರ್ಧಾರವು ಸೈದ್ಧಾಂತಿಕ ಸೆನ್ಸಾರ್ ಶಿಪ್ ಎಂದು ಕೆಲವು ಸದಸ್ಯರು ಟೀಕಿಸಿದ್ದಾರೆ. ಆದರೆ ಕೆಲವು ಸದಸ್ಯರಿಂದ ಬೆಂಬಲ ವ್ಯಕ್ತವಾಗಿದ್ದು, ಪಠ್ಯಗಳನ್ನು ‘ಭಾರತ ಕೇಂದ್ರೀತವಾಗಿಸುವ’ ಹಾಗೂ ‘ನಿಷ್ಪಕ್ಷವಾಗಿಸುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆ ಇದಾಗಿದೆಯೆಂದು ಬಣ್ಣಿಸಿದ್ದಾರೆ.
ಶೈಕ್ಷಣಿಕ ವಿಷಯಗಳ ಕುರಿತ ದಿಲ್ಲಿ ವಿಶ್ವವಿದ್ಯಾನಿಲಯದ ಸ್ಥಾಯಿ ಸಮಿತಿಯು ಬುಧವಾರ ಸಭೆ ನಡೆಸಿದ್ದು, ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯ ನಾಲ್ಕು ಎಲೆಕ್ಟಿವ್ (ಐಚ್ಛಿಕ) ಪಠ್ಯಗಳನ್ನು ಕೈಬಿಡಲು ನಿರ್ಧರಿಸಿತ್ತು. ಇಸ್ಲಾಂ ಹಾಗೂ ಅಂತಾರಾಷ್ಟ್ರೀಯ ಬಾಂಧವ್ಯಗಳು, ಪಾಕಿಸ್ತಾನ ಹಾಗೂ ಜಗತ್ತು, ಸಮಕಾಲೀನ ಜಗತ್ತಿನಲ್ಲಿ ಚೀನಾದ ಪಾತ್ರ, ಪಾಕಿಸ್ತಾನದಲ್ಲಿ ಆಡಳಿತ ಮತ್ತು ಸಮಾಜ ಆ ನಾಲ್ಕು ಪಠ್ಯಗಳಾಗಿವೆ. ಐದನೇ ಐಚ್ಛಿಕ ಪಠ್ಯವಾದ ಧಾರ್ಮಿಕ ರಾಷ್ಟ್ರವಾದ ಹಾಗೂ ರಾಜಕೀಯ ಹಿಂಸಾಚಾರ ಪಠ್ಯದ ಕುರಿತ ನಿರ್ಧಾರವನ್ನು ಜುಲೈ 1 ರಂದು ನಡೆದ ಸಭೆಯಲ್ಲಿ ಪರಾಮರ್ಶಿಸಲಾಯಿತು.
ಈ ನಿರ್ಧಾರವನ್ನು ವಿರೋಧಿಸಿದ ಸಮಿತಿಯ ಸದಸ್ಯೆ ಪ್ರೊಫೆಸರ್ ಮೊನಾಮಿ ಸಿನ್ಹಾ ಅವರು ವಿರೋಧಿಸಿದ್ದಾರೆ. ಇಂತಹ ಬದಲಾವಣೆಗಳು ಶೈಕ್ಷಣಿತವಾಗಿ ಪ್ರಸಕ್ತವಾಗಿರುವ ವಿಷಯಗಳ ವಿಮರ್ಶಾತ್ಮಕ ಚಿಂತನೆಯನ್ನು ದುರ್ಬಲಗೊಳಿಸುತ್ತದೆ ಎಂದವರು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನ ಹಾಗೂ ಚೀನಾದ ಬಗ್ಗೆ ವಿವರವಾಗಿ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ಯಾಕೆಂದರೆ ಭೂರಾಜಕೀಯ ವಾಸ್ತವತೆಗಳನ್ನು ನಿರ್ಲಕ್ಷಿಸುವುದು ಶೈಕ್ಷಣಿಕವಾಗಿ ಸಂಕುಚಿತ ದೃಷ್ಟಿಯಿಂದ ಕೂಡಿದ್ದಾಗಿದೆ ಎಂದು ಮೊನಾಮಿ ಸಿನ್ಹಾ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸಮಾಜಶಾಸ್ತ್ರ ಹಾಗೂ ಭೂಗೋಳ ವಿಷಯಗಳಲ್ಲಿ ‘ಜಾತಿ, ಕೋಮು ಹಿಂಸಾಚಾರ’ ಹಾಗೂ ‘ಸಲಿಂಗ ಸಂಬಂಧ’ ಕುರಿತಾದ ಪಠ್ಯಗಳನ್ನು ತೆಗೆದುಹಾಕುವುದಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಸಮಿತಿಯ ಸದಸ್ಯ ಪ್ರೊಫೆಸರ್ ಹರೇಂದ್ರ ತಿವಾರಿ ಅವರು ಸಮಿತಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಈ ಪಠ್ಯಗಳು ಅಜೆಂಡಾ ಪ್ರೇರಿತವಾಗಿವೆ ಹಾಗೂ ಸಮತೋಲನದ ಕೊರತೆ ಹೊಂದಿವೆ ಎಂದವರು ಪ್ರತಿಪಾದಿಸಿದ್ದಾರೆ.
ಕೇವಲ ಇಸ್ಲಾಂ ಮತ್ತು ಅಂತಾರಾಷ್ಟ್ರೀಯ ಬಾಂಧವ್ಯ ಕುರಿತಾದ ಪಠ್ಯ ಯಾಕೆ ಬೇಕು? ಹಿಂದೂ ಧರ್ಮ ಅಥವಾ ಸಿಖ್ಖ್ ಧರ್ಮದ ಬಗ್ಗೆ ಯಾಕಿಲ್ಲ? ವಿದ್ಯಾರ್ಥಿಗಳು ಹಾಗೂ ನಮ್ಮ ದೇಶಕ್ಕೆ ಪ್ರಯೋಜನಕಾರಿಯಾದ ಪಠ್ಯಗಳು ನಮಗೆ ಬೇಕಾಗಿವೆ ಎಂದವರು ಹೇಳಿದ್ದಾರೆ.







