ನಾಪತ್ತೆಯಾಗಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಮೃತದೇಹ ಯಮುನಾ ನದಿಯಲ್ಲಿ ಪತ್ತೆ

Photo | financialexpress
ಹೊಸದಿಲ್ಲಿ : ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಯಮುನಾ ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಪುರಾ ನಿವಾಸಿ ಸ್ನೇಹಾ ದೇಬ್ನಾಥ್ ಮೃತದೇಹ ಯಮುನಾ ನದಿಯಲ್ಲಿ ಪತ್ತೆಯಾಗಿದೆ. ಆಕೆಯ ಕುಟುಂಬ ಆಕೆಯ ಮೃತದೇಹವನ್ನು ಗುರುತಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಪುರಾದ ನಿವಾಸಿ ಸ್ನೇಹಾ ದೇಬ್ನಾಥ್ ಜುಲೈ 7ರಂದು ನಾಪತ್ತೆಯಾಗಿದ್ದರು. ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಸ್ನೇಹಾ ದೇಬ್ನಾಥ್ ನಾಪತ್ತೆ ಬಳಿಕ ಆಕೆಯ ಕುಟುಂಬ ತೀವ್ರವಾಗಿ ಹುಡುಕಾಟ ನಡೆಸಿತ್ತು. ಜುಲೈ 7ರಂದು ಆಕೆ ಉತ್ತರ ದಿಲ್ಲಿಯ ಸಿಗ್ನೇಚರ್ ಸೇತುವೆಗೆ ಕ್ಯಾಬ್ನಲ್ಲಿ ಹೋಗಿದ್ದಳು. ಆಕೆಯನ್ನು ಸ್ಥಳದಲ್ಲಿ ಇಳಿಸಿದ ಕ್ಯಾಬ್ ಚಾಲಕ ಈ ಕುರಿತು ಮಾಹಿತಿ ನೀಡಿದ್ದ. ಕೆಲವು ಪ್ರತ್ಯಕ್ಷದರ್ಶಿಗಳು ಸೇತುವೆಯ ಮೇಲೆ ಓರ್ವ ಯುವತಿ ನಿಂತಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿದ ದಿಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಕೆ ಸಿಗ್ನೇಚರ್ ಸೇತುವೆಯಿಂದ ಜಿಗಿದಿರುವುದನ್ನು ದೃಢಪಡಿಸಿದ್ದಾರೆ. ಇದರಂತೆ ಕಾರ್ಯಾಚರಣೆ ನಡೆಸಿದಾಗ ಗೀತಾ ಕಾಲೋನಿ ಬಳಿಯ ಯಮುನಾ ನದಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಸ್ನೇಹಾ ನಾಪತ್ತೆ ಬಳಿಕ ಆಕೆಯ ಕೈಬರಹದ ಡೆತ್ ನೋಟ್ ಪತ್ತೆಯಾಗಿತ್ತು. ಆಕೆ ಅಧ್ಯಯನದ ಬಗ್ಗೆ ಅಸಮಾಧಾನಗೊಂಡಿರಲಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ, ಸ್ನೇಹಾ ಕಣ್ಮರೆಯಾದ ಸಮಯದಲ್ಲಿ ಆ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ.







