ʼಮನುಸ್ಮೃತಿʼ, ʼಬಾಬರ್ ನಾಮʼವನ್ನು ಇತಿಹಾಸ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾಪದಿಂದ ಹಿಂದೆ ಸರಿದ ದಿಲ್ಲಿ ವಿವಿ

ದಿಲ್ಲಿ ವಿಶ್ವವಿದ್ಯಾಲಯ | PTI
ಹೊಸದಿಲ್ಲಿ: ಮೊಘಲ್ ಚಕ್ರವರ್ತಿ ಬಾಬರ್ ಆತ್ಮ ಚರಿತ್ರೆ ಬಾಬರ್ ನಾಮಾ ಹಾಗೂ ಮನುಸ್ಮೃತಿಯನ್ನು ವಿಶ್ವವಿದ್ಯಾಲಯದ ಇತಿಹಾಸ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾಪವನ್ನು ದಿಲ್ಲಿ ವಿಶ್ವವಿದ್ಯಾಲಯ ಹಿಂತೆಗೆದುಕೊಳ್ಳಲು ಸಜ್ಜಾಗಿದೆ.
ಈ ಎರಡೂ ವಿಷಯಗಳನ್ನು ಕಲಿಸುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ ಎಂದು ದಿಲ್ಲಿ ವಿವಿ ಕುಲಪತಿ ಯೋಗೇಶ್ ಸಿಂಗ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 19 ರಂದು ಇತಿಹಾಸ ವಿಭಾಗದ ಜಂಟಿ ಕೋರ್ಸ್ಗಳ ಸಮಿತಿಯು ಈ ಪ್ರಸ್ತಾಪವನ್ನು ಮುಂದಿಟ್ಟಿತು. ಈ ಕ್ರಮವನ್ನು ವಿರೋಧಿಸಿ, ಹಲವಾರು ಪ್ರಾಧ್ಯಾಪಕರು ಕುಲಪತಿಗಳಿಗೆ ಪತ್ರ ಬರೆದರು. ಕೆಲವರು ಪಠ್ಯಗಳನ್ನು ಸೇರಿಸುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹಲವರು ಪ್ರಸ್ತಾವನೆಯಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಇಲ್ಲ ಎಂದು ಹೇಳಿದರು
ದಿಲ್ಲಿ ವಿವಿಯು ಪ್ರಗತಿಪರ ವಿಶ್ವವಿದ್ಯಾಲಯವಾಗಿದೆ. ಈ ಬೋಧನಾ ವಿಷಯಗಳ ಪ್ರಸ್ತಾವವನ್ನು ಪರಿಗಣಿಸಲು ಯೋಗ್ಯವಾಗಿಲ್ಲ ಎಂದು ಕುಲಪತಿ ಪ್ರತಿಕ್ರಿಯೆ ನೀಡಿದರು..
"ಇದನ್ನು ಇತಿಹಾಸ ವಿಭಾಗದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ನನಗೆ ತಿಳಿಸಿದ್ದಾರೆ. ಆದರೆ ನಮ್ಮದು ಪ್ರಗತಿಪರ ವಿಶ್ವವಿದ್ಯಾಲಯ, ಇದು 21 ನೇ ಶತಮಾನ. ನಾವು ಆ ಪಠ್ಯಗಳನ್ನು ಕಲಿಸಲು ಬಯಸುವುದಿಲ್ಲ" ಎಂದು ದಿಲ್ಲಿ ವಿವಿ ಕುಲಪತಿ ಯೋಗೇಶ್ ಸಿಂಗ್ The Hinduಗೆ ತಿಳಿಸಿದರು.
ಬಾಬರ್ನಾಮ ಒಬ್ಬ ನಿರಂಕುಶಾಧಿಕಾರಿಯ ಆತ್ಮಚರಿತ್ರೆ. ಈಗ ಅದನ್ನು ಕಲಿಸುವುದರಲ್ಲಿ ಯಾವುದೇ ಪ್ರಸ್ತುತತೆ ಇಲ್ಲ ಎಂದು ಅವರು ಹೇಳಿದರು.
"2047 ರ ವೇಳೆಗೆ ಭಾರತದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪವನ್ನು ನಾವು ಹೇಗೆ ಸಾಧಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ದಿಲ್ಲಿ ವಿವಿಯು ತನ್ನ ಅಧ್ಯಯನ ಸಾಮಗ್ರಿಯನ್ನು ವಿನ್ಯಾಸಗೊಳಿಸುತ್ತದೆ" ಎಂದು ಯೋಗೇಶ್ ಸಿಂಗ್ ಹೇಳಿದರು.







