Delhi | ಬಿಜೆಪಿಯ ಉನ್ನತ ನಾಯಕರಿಗೆ ಸಂಬಂಧಿಸಿದ ಕಾರುಗಳಿಗೆ ನಕಲಿ ರಾಜತಾಂತ್ರಿಕ ಫಲಕಗಳ ಬಳಕೆ: ಮಹಿಳೆ ಬಂಧನ

ಅಶ್ಮಾ ಬೇಗಂ|PC: PTI
ಹೊಸದಿಲ್ಲಿ: ವಿದೇಶಿ ರಾಜತಾಂತ್ರಿಕ ಅಧಿಕಾರಿಯ ಸೋಗು ಹಾಕಿಕೊಂಡು ರಾಷ್ಟ್ರ ರಾಜಧಾನಿಯ ಅತಿ ಭದ್ರತೆಯ ಪ್ರದೇಶಗಳಿಗೆ ಪ್ರವೇಶ ಪಡೆಯಲು ಇನೋವಾ ಕಾರಿನ ಮೇಲೆ ನಕಲಿ ರಾಜತಾಂತ್ರಿಕ ಸಂಖ್ಯಾ ಫಲಕಗಳನ್ನು ಬಳಸಿದ ಆರೋಪದ ಮೇಲೆ ದಿಲ್ಲಿ ಅಪರಾಧ ವಿಭಾಗದ ಸುಲಿಗೆ ಮತ್ತು ಅಪಹರಣ ನಿಗ್ರಹ ದಳದ ಪೊಲೀಸರು ಮಹಿಳೆಯೊಬ್ಬರನ್ನು ಅಸ್ಸಾಂನಿಂದ ಬಂಧಿಸಿದ್ದಾರೆ.
77ನೇ ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳಿರುವಾಗ ಈ ಬಂಧನ ನಡೆದಿದೆ. ಬಂಧಿತ ಆರೋಪಿಗೆ ಬಿಜೆಪಿಯ ಹಲವು ಉನ್ನತ ನಾಯಕರೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಲಾಗಿದೆ.
ಬಂಧಿತ ಮಹಿಳೆಯನ್ನು ಅಸ್ಸಾಂನ ಗುವಾಹಟಿ ನಿವಾಸಿ ಅಶ್ಮಾ ಬೇಗಂ ಎಂದು ಗುರುತಿಸಲಾಗಿದೆ. ಜನವರಿ 15ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಕಲಿ ರಾಜತಾಂತ್ರಿಕ ಸಂಖ್ಯಾ ಫಲಕಗಳನ್ನು ಅಳವಡಿಸಿಕೊಂಡು ಟೊಯೊಟಾ ಇನೋವಾ ಕಾರನ್ನು ಚಲಾಯಿಸುತ್ತಿದ್ದಾಗ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಕೆಯಿಂದ ಪೊಲೀಸರು ಮೂರು ನಕಲಿ ರಾಜತಾಂತ್ರಿಕ ಸಂಖ್ಯಾ ಫಲಕಗಳು, ಒಂದು ಮೊಬೈಲ್ ಫೋನ್ ಹಾಗೂ ವಾಹನದ ಮಾರಾಟ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಖಚಿತ ಸುಳಿವಿನ ಆಧಾರದ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಸತಿ ಇಲಾಖೆಯ ಕೇಂದ್ರ ಸರಕಾರಿ ಕಚೇರಿಗಳು, ರಾಜತಾಂತ್ರಿಕ ಕಚೇರಿಗಳು, ದೂತಾವಾಸಗಳು ಹಾಗೂ ವಿದೇಶಿ ರಾಜತಾಂತ್ರಿಕರ ನಿವಾಸಗಳಿಗೆ ಪ್ರವೇಶ ಪಡೆಯಲು ಆಕೆ ನಕಲಿ ರಾಜತಾಂತ್ರಿಕ ಗುರುತನ್ನು ಬಳಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜತಾಂತ್ರಿಕ ಅಧಿಕಾರಿಯ ಸೋಗು ಹಾಕಿಕೊಂಡು ಆಕೆ ಹಲವು ರಾಜತಾಂತ್ರಿಕ ಕಚೇರಿಗಳು ಆತಿಥ್ಯ ವಹಿಸಿದ್ದ ಕಾರ್ಯಕ್ರಮಗಳಿಗೆ ಹಾಜರಾಗಿದ್ದಳು ಎಂಬ ಸಂಗತಿಯನ್ನು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ರಾಜತಾಂತ್ರಿಕ ಹುದ್ದೆಯ ಗುರುತನ್ನು ನೀಡುವಲ್ಲಿ ಆಕೆ ವಿಫಲಳಾಗಿದ್ದಾಳೆ. ಯಾವುದೇ ಮಾನ್ಯತೆ ಪಡೆದ ರಾಜತಾಂತ್ರಿಕ ಅರ್ಹತೆಗಳು ಅಥವಾ ವಾಹನದ ನೋಂದಣಿ ದಾಖಲೆಗಳನ್ನು ಒದಗಿಸುವಲ್ಲಿಯೂ ಆಕೆ ವಿಫಲಳಾಗಿದ್ದಾಳೆ. ಬಳಿಕ, ನವೆಂಬರ್ 2024ರಲ್ಲಿ ವಿದೇಶಿ ರಾಜತಾಂತ್ರಿಕ ಕಚೇರಿಯಿಂದ ಕಾರೊಂದನ್ನು ಖರೀದಿಸಿದ್ದೆ. ಆದರೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ.
ಆದರೆ, ಫ್ಯಾಕ್ಟ್ ಚೆಕರ್ ಹಾಗೂ ಪತ್ರಕರ್ತ ಮುಹಮ್ಮದ್ ಝುಬೇರ್ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಕಿರಣ್ ರಿಜಿಜು, ನಿತಿನ್ ಗಡ್ಕರಿ, ರಾಮದಾಸ್ ಅಠಾವಳೆ ಸೇರಿದಂತೆ ಇತರ ಬಿಜೆಪಿ ನಾಯಕರೊಂದಿಗೆ ಆಕೆ ಇರುವ ಭಾವಚಿತ್ರಗಳನ್ನು ಟ್ವೀಟ್ ಮಾಡಿದ ಬಳಿಕ, ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಆರೋಪಿ ಮಹಿಳೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ಮುಹಮ್ಮದ್ ಝುಬೇರ್ ಆರೋಪಿಸಿದ್ದಾರೆ. ಅಲ್ಲದೆ, ಬ್ರಿಕ್ಸ್ ಸಮ್ಮೇಳನದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಆಕೆ ಭಾರತದ ರಾಯಭಾರಿಯಾಗಿ ಭಾಗವಹಿಸಿ ಪ್ರಮುಖ ವಿಷಯಗಳನ್ನು ಪ್ರಸ್ತುತಪಡಿಸಿದ್ದಳು ಎಂದೂ ಅವರು ಆಪಾದಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಅಶ್ಮಾ ಬೇಗಂ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಈ ರೀತಿಯ ಸೋಗನ್ನು ಆಕೆ ಎಷ್ಟು ಕಾಲ ಹಾಕಿಕೊಂಡಿದ್ದಳು ಹಾಗೂ ಆಕೆಯ ಸಹಚರರನ್ನು ಗುರುತಿಸುವ ಸಲುವಾಗಿ ಪೊಲೀಸರು ಆಕೆಯ ಡಿಜಿಟಲ್ ದತ್ತಾಂಶ ಮತ್ತು ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.







