ವಾಯುಮಾಲಿನ್ಯ ಪ್ರಮಾಣದಲ್ಲಿ ಏರಿಕೆ: ದಿಲ್ಲಿ ನಿವಾಸಿಗಳ ಆರೋಗ್ಯ ವಿಮೆ ಕಂತಿನ ಮೊತ್ತದಲ್ಲಿ ಹೆಚ್ಚಳ ಸಾಧ್ಯತೆ

Photo | Reuters
ಹೊಸದಿಲ್ಲಿ: 2024ರಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಗಂಭೀರ ಸ್ವರೂಪದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದಿಲ್ಲಿ ನಿವಾಸಿಗಳು ಪಾವತಿಸುತ್ತಿರುವ ಆರೋಗ್ಯ ವಿಮೆ ಕಂತಿನ ಮೊತ್ತವನ್ನು ಶೇ. 10ರಿಂದ ಶೇ. 15ರಷ್ಟು ಹೆಚ್ಚಳ ಮಾಡುವ ಕುರಿತು ವಿಮಾ ಸಂಸ್ಥೆಗಳು ಯೋಚಿಸುತ್ತಿವೆ ಎಂದು ಈ ವಿಷಯವನ್ನು ಬಲ್ಲ ಒಂಭತ್ತು ಅಧಿಕಾರಿಗಳು ತಿಳಿಸಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಗಳು ಈ ಯೋಜನೆಯ ಕುರಿತು ಚರ್ಚಿಸುತ್ತಿದ್ದು, ಈ ಪ್ರಸ್ತಾವನೆಗೆ ವಿಮಾ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಈ ಪ್ರಸ್ತಾವನೆಗೇನಾದರೂ ಅನುಮೋದನೆ ದೊರೆತರೆ, ಭಾರತದಲ್ಲಿ ಆರೋಗ್ಯ ವಿಮೆ ಕಂತನ್ನು ಲೆಕ್ಕ ಹಾಕುವಲ್ಲಿ ವಾಯು ಮಾಲಿನ್ಯ ನೇರ ಅಂಶವಾಗಿ ಬಳಕೆಯಾಗಲಿದ್ದು, ಇತರ ನಗರಗಳಲ್ಲಿ ಬೆಲೆ ಏರಿಕೆಯನ್ನು ಸಮರ್ಥಿಸಲು ಈ ಮಾನದಂಡ ಬಳಕೆಯಾಗುವ ಸಾಧ್ಯತೆ ಇದೆ.
ವಿಷಪೂರಿತ ಗಾಳಿಯಿಂದಾಗಿ ಇದಕ್ಕೂ ಹಿಂದಿನ ವರ್ಷಗಳಿಗಿಂತ 2024ರಲ್ಲಿ ಅಸ್ತಮಾ, ದೀರ್ಘಕಾಲೀನ ಪ್ರತಿರೋಧಕ ಶ್ವಾಸಕೋಶ ಕಾಯಿಲೆ(ಸಿಒಪಿಡಿ) ಹಾಗೂ ಹೃದಯ ರಕ್ತನಾಳ ಸಮಸ್ಯೆಗಳಿಗೆ ದಿಲ್ಲಿ ನಿವಾಸಿಗಳು ಹೆಚ್ಚು ಚಿಕಿತ್ಸೆ ಪಡೆದಿದ್ದರು ಎಂದು ಐವರು ಅಧಿಕಾರಿಗಳು ತಿಳಿಸಿದ್ದಾರೆ.
“ದರ ನಿಗದಿಯ ಸಂದರ್ಭದಲ್ಲಿ ನಾವು ವಾಯು ಮಾಲಿನ್ಯವನ್ನು ಪ್ರತ್ಯೇಕ ಅಂಶವನ್ನಾಗಿ ಪರಿಗಣಿಸುವ ಕುರಿತು ಚಿಂತಿಸಲು ಪ್ರಾರಂಭಿಸಬೇಕಿದೆ ಹಾಗೂ ಇದರಿಂದ ಯಾವೆಲ್ಲ ವಲಯಗಳ ಮೇಲೆ ಪರಿಣಾಮವಾಗಲಿದೆ ಎಂಬುದನ್ನು ಗಮನಿಸಿದ ನಂತರ, ಈ ನಿರ್ದಿಷ್ಟ ದರ ನಿಗದಿಯನ್ನು ಜಾರಿಗೊಳಿಸಲು ಪ್ರಾರಂಭಿಸಬೇಕಾಗುತ್ತದೆ” ಎಂದು ಭಾರತದ ಮುಂಚೂಣಿ ಆರೋಗ್ಯ ವಿಮಾ ಸಂಸ್ಥೆಯಾದ ಸ್ಟಾರ್ ಹೆಲ್ತ್ನ ಕಾರ್ಯನಿರ್ವಾಹಕ ಮುಖ್ಯಸ್ಥ ಅಮಿತಾಬ್ ಬಚ್ಚನ್ ಅಭಿಪ್ರಾಯ ಪಟ್ಟಿದ್ದಾರೆ.
2024ರಲ್ಲಿ ಶ್ವಾಸಕೋಶ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯಕ್ಕೆ ಒಳಗಾಗಿದ್ದ ವರ್ಷದ ಮೊದಲ ಭಾಗದಲ್ಲಿನ ಶೇ. 5ರಿಂದ 6ರಷ್ಟು ರೋಗಿಗಳ ಪ್ರಮಾಣಕ್ಕೆ ಹೋಲಿಸಿದರೆ, ವರ್ಷದ ಎರಡನೆ ಭಾಗದಲ್ಲಿ ಶೇ. 17ರಿಂದ ಶೇ. 18ರಷ್ಟು ಏರಿಕೆಯಾಗಿತ್ತು ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಹಾಗೂ ಭಾರತದ ಮೆಡಿ ಅಸಿಸ್ಟ್ ಸಿದ್ಧಪಡಿಸಿರುವ ಜಂಟಿ ವರದಿಯ ಪ್ರಕಾರ, 2023ರಿಂದ 2025ರ ನಡುವಿನ ಹಣಕಾಸು ವರ್ಷದಲ್ಲಿ ದಿಲ್ಲಿಯಲ್ಲಿ ಶ್ವಾಸಕೋಶ ಕಾಯಿಲೆ ಸಂಬಂಧಿ ಸಲ್ಲಿಕೆಯಾಗಿದ್ದ ಮೆಡಿಕ್ಲೈಮ್ ಗಳ ಪ್ರಮಾಣ ಶೇ. 8.3ರಷ್ಟು ಏರಿಕೆಯಾಗಿತ್ತು. ಇದು ಈ ಅವಧಿಯಲ್ಲಿ ಭಾರತದಲ್ಲಿ ದಾಖಲಾಗಿರುವ ಅತ್ಯಧಿಕ ಪ್ರಮಾಣದ ಆರೋಗ್ಯ ಆರೈಕೆ ವೆಚ್ಚದಲ್ಲಿನ ಏರಿಕೆಯಾಗಿದೆ ಎಂದೂ ಹೇಳಲಾಗಿದೆ.







