‘ಮನಿ ಹೈಸ್ಟ್’ನಿಂದ ಪ್ರೇರಿತ ದಿಲ್ಲಿಯ ಗ್ಯಾಂಗ್ನಿಂದ 150 ಕೋ.ರೂ.ವಂಚನೆ

Photo : ndtv
ಹೊಸದಿಲ್ಲಿ,ನ.5: ನೆಟ್ ಫ್ಲಿಕ್ಸ್ ಥ್ರಿಲ್ಲರ್ ‘ಮನಿ ಹೈಸ್ಟ್’ನಿಂದ ಪ್ರೇರಿತ ದಿಲ್ಲಿಯ ಖದೀಮರ ಗ್ಯಾಂಗೊಂದು ವಿಸ್ತೃತ ಯೋಜನೆಯ ಮೂಲಕ ಜನರಿಗೆ 150 ಕೋ.ರೂ.ಗಳ ಪಂಗನಾಮ ಹಾಕಿದೆ. ಈ ಗ್ಯಾಂಗ್ ನ ಸದಸ್ಯರು ಥ್ರಿಲ್ಲರ್ನಲ್ಲಿಯ ಪಾತ್ರಗಳ ಹೆಸರುಗಳನ್ನೂ ಇಟ್ಟುಕೊಂಡಿದ್ದರು. ಆನ್ಲೈನ್ನಲ್ಲಿ ಜನರನ್ನು ವಂಚಿಸುವ ಮೂಲಕ ಅವರು ಇನ್ನೂ 23 ಕೋ.ರೂ.ಗಳನ್ನು ಗಳಿಸಿದ್ದರು.
ಅರ್ಪಿತ್, ಪ್ರಭಾತ್ ಮತ್ತು ಅಬ್ಬಾಸ್ ಎಂದು ಗುರುತಿಸಲಾಗಿರುವ ಗ್ಯಾಂಗ್ ಸದಸ್ಯರನ್ನು ದಿಲ್ಲಿ ಪೋಲಿಸರು ಬಂಧಿಸಿದ್ದಾರೆ.
ಈ ಖದೀಮರು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಮೂಲಕ ಉತ್ತಮ ಲಾಭದ ಭರವಸೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ವಂಚಿಸಿದ್ದಾರೆ.
ವೆಬ್ ಸರಣಿಯಿಂದ ಪ್ರೇರಿತರಾಗಿ ಮತ್ತು ತಮ್ಮ ಗುರುತನ್ನು ಮರೆಮಾಚಲು ಅವರು ಪಾತ್ರಗಳ ಹೆಸರುಗಳನ್ನು ಬಳಸಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
ವಕೀಲ ಅರ್ಪಿತ್ ‘ಪ್ರೊಫೆಸರ್’ಆದರೆ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವೀಧರ ಪ್ರಭಾತ್ ವಾಜಪೇಯಿ ‘ಅಮಂಡಾ’ ಹೆಸರಿಟ್ಟುಕೊಂಡಿದ್ದ ಮತ್ತು ಅಬ್ಬಾಸ್ ‘ಫ್ರೆಡ್ಡಿ’ ಆಗಿದ್ದ.
ವಾಟ್ಸ್ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ರಹಸ್ಯ ಗುಂಪುಗಳನ್ನು ರಚಿಸಿದ್ದ ಅವರು ಅಲ್ಲಿ ಜನರಿಗೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಲಾಭದ ಆಮಿಷವನ್ನೊಡ್ಡಿದ್ದರು.
ಆರಂಭದಲ್ಲಿ ಸಣ್ಣ ಲಾಭವನ್ನು ಹಿಂದಿರುಗಿಸುವ ಮೂಲಕ ಈ ಗ್ಯಾಂಗ್ ಜನರ ವಿಶ್ವಾಸವನ್ನು ಗಳಿಸಿತ್ತು. ಆದರೆ ಯಾರಾದರೂ ದೊಡ್ಡ ಮೊತ್ತವನ್ನು ಹೂಡಿಕೆಗೆಂದು ಜಮೆ ಮಾಡಿದರೆ ಖಾತೆಯನ್ನು ನಿರ್ಬಂಧಿಸಲಾಗುತ್ತಿತ್ತು.
ಹಣವನ್ನು ಹಿಂದೆಗೆದುಕೊಳ್ಳಲು ಪ್ರಯತ್ನಿಸಿದ್ದವರು ವಂಚನೆಯ ಬಲೆಗೆ ಬಿದ್ದಿದ್ದರು ಮತ್ತು ಇನ್ನಷ್ಟು ಹಣವನ್ನು ಜಮಾ ಮಾಡುವಂತೆ ಅವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತಿತ್ತು. ಈ ವಿಧಾನವನ್ನು ಬಳಸಿಕೊಂಡು ದೇಶಾದ್ಯಂತ 300ಕ್ಕೂ ಅಧಿಕ ಜನರನ್ನು ವಂಚಿಸಲಾಗಿದೆ.
ಗ್ಯಾಂಗ್ ಸದಸ್ಯರು ಆಗಾಗ್ಗೆ ಐಷಾರಾಮಿ ಹೋಟೆಲ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಮತ್ತು ಕೇವಲ ಮೊಬೈಲ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳನ್ನು ಬಳಸಿ ಅಲ್ಲಿಂದಲೇ ಜನರನ್ನು ವಂಚಿಸುತ್ತಿದ್ದರು ಎಂದು ಪೋಲಿಸರು ತಿಳಿಸಿದರು.
ತನಿಖೆಯ ಭಾಗವಾಗಿ ಪೋಲಿಸರು ಉತ್ತರ ಪ್ರದೇಶದ ನೊಯ್ಡಾ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿಯ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದರು.
ಪೋಲಿಸರು ಈವರೆಗೆ 11 ಮೊಬೈಲ್ ಫೋನ್ ಗಳು,17 ಸಿಮ್ ಕಾರ್ಡ್ ಗಳು,12 ಬ್ಯಾಂಕ್ ಪಾಸ್ಬುಕ್ ಗಳು ಮತ್ತು ಚೆಕ್ ಬುಕ್ ಗಳು, 32 ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವಾರು ಆನ್ಲೈನ್ ವಹಿವಾಟುಗಳ ಸ್ಕ್ರೀನ್ ಶಾಟ್ ಗಳು ಮತ್ತು ವಾಟ್ಸ್ಆ್ಯಪ್ ಚಾಟ್ ಗಳೂ ಪೋಲಿಸರ ಕೈಸೇರಿವೆ.
ತಮ್ಮ ದೇಶದಿಂದ ಕಾರ್ಯಾಚರಿಸುತ್ತಿರುವ ಚೀನಿ ವಂಚಕರ ಜಾಲವೊಂದು ಈ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಪೋಲಿಸರು ಶಂಕಿಸಿದ್ದಾರೆ. ಇದೇ ಗ್ಯಾಂಗ್ ಆನ್ಲೈನ್ನಲ್ಲಿ ವಿವಿಧ ವಿಧಾನಗಳನ್ನು ಬಳಸಿಕೊಂಡು ಇನ್ನೂ 23 ಕೋ.ರೂ.ಗಳನ್ನು ದೋಚಿದೆ ಎಂದು ಪೋಲಿಸರು ಹೇಳಿದ್ದಾರೆ.
ಪೋಲಿಸರು ಗ್ಯಾಂಗ್ ನ ಇನ್ನಷ್ಟು ಸದಸ್ಯರು ಮತ್ತು ಅವರ ವಿದೇಶಿ ಜಾಲಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.







