ಸರನಾ ಧರ್ಮಕ್ಕೆ ಮಾನ್ಯತೆ ಆಗ್ರಹಿಸಿ ಡಿ. 30ರಂದು ಭಾರತ ಬಂದ್
ಸಾಂದರ್ಭಿಕ ಚಿತ್ರ | Photo: PTI
ಜೆಮ್ಶೆಡ್ಪುರ: ಸರನಾ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬ ತಮ್ಮ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್ 30ರಂದು ಸಾಂಕೇತಿಕ ಭಾರತ್ ಬಂದ್ ಗೆ ಬುಡಕಟ್ಟು ಸಂಘಟನೆ ಆದಿವಾಸಿ ಸೆಂಗೆಲ್ ಅಭಿಯಾನ್ (ಎಎಸ್ಎ) ಬುಧವಾರ ಕರೆ ನೀಡಿದೆ.
ಸರನಾ ಧರ್ಮ ಸಂಹಿತೆ ದೇಶದ 15 ಕೋಟಿ ಬುಡಕಟ್ಟು ಜನರ ಗುರುತಾಗಿದೆ. ಬುಡಕಟ್ಟು ಸಮದಾಯದ ಧರ್ಮಕ್ಕೆ ಮಾನ್ಯತೆ ನಿರಾಕರಿಸುವುದು ಸಾಂವಿಧಾನಿಕ ಅಪರಾಧಕ್ಕೆ ಸಮಾನ ಎಂದು ಎಎಸ್ಎ ಅಧ್ಯಕ್ಷ ಸಾಲ್ಖನ್ ಮುರ್ಮು ಹೇಳಿದ್ದಾರೆ.
ಇತರ ಧರ್ಮಗಳನ್ನು ಅನುಸರಿಸುವಂತೆ ಸಮುದಾಯವನ್ನು ಬಲವಂತಪಡಿಸುವುದು ಧರ್ಮದ ಗುಲಾಮಗಿರಿಯನ್ನು ಅನುಸರಿಸಲು ಒತ್ತಾಯಿಸಿದಂತೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿವೆ ಎಂದು ಅವರು ಆರೋಪಿಸಿದರು.
1951ರ ಜನಗಣತಿಯಲ್ಲಿ ಸರನಾ ಧರ್ಮಕ್ಕೆ ಪ್ರತ್ಯೇಕ ಸಂಹಿತೆ ಇತ್ತು. ಆದರೆ, ಅದನ್ನು ಅನಂತರ ಕಾಂಗ್ರೆಸ್ ತೆಗೆದು ಹಾಕಿತು. ಬಿಜೆಪಿ ಈಗ ಬುಡಕಟ್ಟುಗಳನ್ನು ವನವಾಸಿ ಹಾಗೂ ಹಿಂದೂ ಎಂದು ಮತಾಂತರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುರ್ಮು ಪ್ರತಿಪಾದಿಸಿದ್ದಾರೆ.
ಸರನಾ ಧರ್ಮಕ್ಕೆ ಮಾನ್ಯತೆ ನೀಡುವ ಪಕ್ಷಕ್ಕೆ ನಾವು ಮತ ಚಲಾಯಿಸಲಿದ್ದೇವೆ ಎಂದು ಮುರ್ಮು ಹೇಳಿದರು.
ಸರನಾ ಬುಡಕಟ್ಟು ಸಮುದಾಯಗಳ ದೇಶಿ ಧಾರ್ಮಿಕ ನಂಬಿಕೆ. ಇಲ್ಲಿ ಬೆಟ್ಟ, ಅರಣ್ಯ ಹಾಗೂ ವನ್ಯಜೀವಿಗಳ ಆರಾಧನೆ ಪ್ರಧಾನವಾಗಿವೆ. ಜನಗಣತಿಯ ಧರ್ಮ ಸಂಹಿತೆಯಲ್ಲಿ ಸರನಾ ಧರ್ಮಕ್ಕೆ ಸ್ವತಂತ್ರ್ಯ ವರ್ಗವನ್ನು ನೀಡಬೇಕೆಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ (ಎನ್ ಸಿ ಎಸ್ಟಿ) ಸೂಚಿಸಿದೆ.