ಹೆಚ್ಚುತ್ತಿರುವ ಉಷ್ಣತೆಯೊಂದಿಗೆ ಡೆಂಗ್ಯೂ ಸಾವಿನ ಸಂಖ್ಯೆಯಲ್ಲೂ ಹೆಚ್ಚಳ: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | Photo: NDTV
ಹೊಸದಿಲ್ಲಿ : ಡೆಂಗ್ಯೂ ಕಾಯಿಲೆಯಿಂದಾಗಿ ಭಾರತದಲ್ಲಿ ಸಂಭವಿಸುವ ಸಾವಿನ ಸಂಖ್ಯೆಯು 2030ರ ವೇಳೆಗೆ ಗಣನೀಯವಾಗಿ ಮತ್ತು 2050ರ ವೇಳೆಗೆ ಮತ್ತಷ್ಟು ಹೆಚ್ಚುತ್ತದೆ ಎಂದು ಪರಿಸರ ವಿಜ್ಞಾನಿಗಳು ನಡೆಸಿರುವ ನೂತನ ಅಧ್ಯಯನವೊಂದು ತಿಳಿಸಿದೆ.
ಭಾರತದಲ್ಲಿ ಹವಾಮಾನ ಬದಲಾವಣೆ ಮತ್ತು ಡೆಂಗ್ಯೂ ನಡುವೆ ಇರುವ ಅಂತರ್ಗತ ನಂಟಿನ ಮೇಲೆ ಪುಣೆಯ ಇಂಡಿಯನ್ ಇನ್ಸ್ಟ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೀಟಿಯರಾಲಜಿ (ಐಐಟಿಎಮ್)ಯ ಹವಾಮಾನ ವಿಜ್ಞಾನಿಗಳಾದ ಸೋಫಿಯಾ ಯಾಕೂಬ್ ಮತ್ತು ರಾಕ್ಸಿ ಮ್ಯಾಥ್ಯೂ ಕೋಲ್ ನೇತೃತ್ವದಲ್ಲಿ ನಡೆದ ಅಧ್ಯಯನವೊಂದು ಬೆಳಕು ಚೆಲ್ಲಿದೆ.
ಮಳೆಗಾಲದ ಅವಧಿಯಲ್ಲಿ (ಜೂನ್-ಸೆಪ್ಟಂಬರ್), 27 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ಬೆಚ್ಚನೆ ಉಷ್ಣತೆ, ಸಾಧಾರಣ ಹಾಗೂ ಸಮಾನವಾಗಿ ಹಂಚಿಕೆಯಾದ ಮಳೆ ಮತ್ತು 60 ಶೇ. ಮತ್ತು 78 ಶೇ. ನಡುವಿನ ತೇವಾಂಶ ಮಟ್ಟವು ಡೆಂಗಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ‘ನೇಚರ್ಸ್ ಸಾಯಿಂಟಿಫಿಕ್ ರಿಪೋರ್ಟ್ಸ್’ನಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯು ಹೇಳುತ್ತದೆ.
ಆದರೆ, ವಾರದಲ್ಲಿ 150 ಮಿಲಿಮೀಟರ್ಗಿಂತಲೂ ಹೆಚ್ಚಿನ ಭಾರೀ ಮಳೆಯು ಡೆಂಗಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಎಂದು ಅದು ಹೇಳುತ್ತದೆ. ಭಾರೀ ಮಳೆಯಲ್ಲಿ ಸೊಳ್ಳೆಗಳ ಮೊಟ್ಟೆಗಳು ಮತ್ತು ಲಾರ್ವಾಗಳು ಕೊಚ್ಚಿಹೋಗುವುದು ಇದಕ್ಕೆ ಕಾರಣವಾಗಿದೆ.







