ಮಾನವಹಕ್ಕು ದಿನದಂದೇ ಪ್ರತಿಭಟನೆಗೆ ದಿಲ್ಲಿ ಪೊಲೀಸರಿಂದ ಅನುಮತಿ ನಿರಾಕರಣೆ

Photo: PTI
ಹೊಸದಿಲ್ಲಿ: ವಿಶ್ವ ಮಾನವಹಕ್ಕು ದಿನವಾದ ಸೋಮವಾರ ಇಲ್ಲಿನ ಜಂತರ್ಮಂತರ್ ಪ್ರದೇಶದಲ್ಲಿ ರವಿವಾರ ಸಾಮಾಜಿಕ ಹೋರಾಟ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಭಾರತದಲ್ಲಿ ಮಾನವಹಕ್ಕುಗಳ ಸ್ಥಿತಿಗತಿ ಬಗ್ಗೆ ಈ ಪ್ರತಿಭಟನಾಸಭೆಯು ಬೆಳಕುಚೆಲ್ಲಲಿದೆಯೆಂದು ಸಂಘಟಕರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪತ್ರದಲ್ಲಿ ತಿಳಿಸಿದ್ದರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣನೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಲಾಗಿಲ್ಲವೆಂದು ಹೊಸದಿಲ್ಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತ್ ಕುಮಾರ್ ಅವರು ಶನಿವಾರ ಸಂಘಟಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆಂದು ಸ್ಕ್ರೋಲ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ನಾಗರಿಕ ಸ್ವಾತಂತ್ರ್ಯ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು, ಮಾನವಹಕ್ಕುಗಳ ಸಂಘಟನೆಗಳು, ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತಿತರ ಹಲವು ಸಂಘಟನೆಗಳ ಒಕ್ಕೂಟವಾದ ‘ಆಡಳಿತದ ದಬ್ಬಾಳಿಕೆ ವಿರುದ್ಧ ಆಂದೋಲನ’ ನವೆಂಬರ್ 28ರಂದು ಸಂಸತ್ಭವನ ರಸ್ತೆ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿತ್ತು.
ಮಾನವಹಕ್ಕುಗಳ ಕುರಿತ ಸಾರ್ವತ್ರಿಕ ಘೋಷಣೆಗೆ ತನ್ನ ಸಹಿದಾರನಾಗಿದ್ದೇನೆ ಹಾಗೂ ಮಹಿಳೆಯರ ವಿರುದ್ಧದ ಎಲ್ಲಾ ರೀತಿ ತಾರತಮ್ಯದ ನಿರ್ಮೂಲನೆ ಕುರಿತ ಒಡಂಬಡಿಕೆ ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯಿಂದ ಮಾನ್ಯತೆಯನ್ನು ತಾನು ಪಡೆದಿರುವುದಾಗಿ ಒಕ್ಕೂಟವು ಅರ್ಜಿಯಲ್ಲಿ ತಿಳಿಸಿತ್ತು.
ಈ ಸಭೆಯಲ್ಲಿ 250 ಮಂದಿ ಪಾಲ್ಗೊಲ್ಲುವ ನಿರೀಕ್ಷೆಯಿದೆಯೆಂದೂ ಒಕ್ಕೂಟವು ಅರ್ಜಿಯಲ್ಲಿ ತಿಳಿಸಿತ್ತು. ಸಿಪಿಐನ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ದಬ್ಬಾಳಿಕೆ ವಿರುದ್ಧದ ವೇದಿಕೆಯ ಸಂಚಾಲಕ ಜಿ. ಹರಗೋಪಾಲ್, ಸಾಮಾಜಿಕ ಕಾರ್ಯಕರ್ತ ಆಸೀಫ್ ಇಕ್ಬಾಲ್ ತನ್ಹಾ, ಆದಿವಾಸಿ ಹಕ್ಕುಗಳ ಸರ್ಜು ಟೆಕಾಂ ಹಾಗೂ ಕಾರ್ಮಿಕ ಹಕ್ಕುಗ ಹೋರಾಟಗಾರ ಬಚ್ಚಾ ಸಿಂಗ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದರು.
ಪ್ರತಿಭಟನಾ ಸಭೆಗಳ ಕುರಿತು ಸುಪ್ರೀಂಕೋರ್ಟ್ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುವುದೆಂದು ತಾವು ಪೊಲೀಸರಿಗೆ ಲಿಖಿತ ಭರವಸೆಯನ್ನು ನೀಡಿದ್ದ ಹೊರತಾಗಿಯೂ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







