ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಟಿಕೆಟ್ ನಿರಾಕರಣೆ|ಎನ್ಸಿಪಿ ಕಚೇರಿಯ ಟಿವಿ, ಕಿಟಕಿಗಳನ್ನು ಧ್ವಂಸಗೊಳಿಸಿದ ಕಾರ್ಯಕರ್ತರು

ಸಾಂದರ್ಭಿಕ ಚಿತ್ರ | Photo Credit : freepik
ನಾಗ್ಪುರ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ನಾಗ್ಪುರದಲ್ಲಿರುವ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ನಾಗ್ಪುರ ನಗರ ಪಾಲಿಕೆ ಚುನಾವಣೆಯಲ್ಲಿ ಅವಿನಾಶ್ ಪರ್ದಿಕರ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಎನ್ಸಿಪಿ ಕಾರ್ಯಕರ್ತರು ಗಣೇಶ್ ಪೇಟ್ ಪ್ರದೇಶದಲ್ಲಿರುವ ಎನ್ಸಿಪಿ ಕಚೇರಿಯಲ್ಲಿನ ಟಿವಿ ಹಾಗೂ ಕಿಟಕಿಯ ಗಾಜುಗಳನ್ನು ಹಾನಿಗೊಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ಸಿಪಿ ನಗರ ಘಟಕದ ಮುಖ್ಯಸ್ಥ ಅನಿಲ್ ಅಹಿರ್ಕರ್, ಪಕ್ಷದ ಕಾರ್ಯಕರ್ತರು ಅಸಮಾಧಾನಗೊಳ್ಳುವುದು ಸಹಜವಾಗಿದೆ ಎಂದು ಹೇಳಿದ್ದಾರೆ.
“ಒಂದು ಸ್ಥಾನಕ್ಕೆ 10ಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸುತ್ತಿದ್ದರು. ಆದರೆ, ಕೇವಲ ಓರ್ವ ಅಭ್ಯರ್ಥಿಗೆ ಮಾತ್ರ ಟಿಕೆಟ್ ದೊರೆಯಲು ಸಾಧ್ಯ. ನಾವು ಎಲ್ಲರಿಗೂ ನ್ಯಾಯವನ್ನು ಖಾತರಿ ಪಡಿಸಲು ಪ್ರಯತ್ನಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಜನವರಿ 15ರಂದು ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಮರುದಿನ ಮತ ಎಣಿಕೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ನಾಮಪತ್ರಗಳನ್ನು ಹಿಂಪಡೆಯಲು ಜನವರಿ 2 ಕೊನೆಯ ದಿನವಾಗಿದೆ.







