ದಿಲ್ಲಿಯಲ್ಲಿ ಆವರಿಸಿದ ದಟ್ಟ ಮಂಜು: ವಿಮಾನ, ರೈಲುಗಳ ಸೇವೆಯಲ್ಲಿ ವ್ಯತ್ಯಯ

Photo: PTI
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ರವಿವಾರ ದಟ್ಟ ಮಂಜು ಆವರಿಸಿದ್ದು, ಗೋಚರತೆಯ ಪ್ರಮಾಣಕ್ಕೆ ಶೂನ್ಯಕ್ಕೆ ಕುಸಿದಿದೆ. ಈ ಪ್ರಾಂತ್ಯದಾದ್ಯಂತ ತೀವ್ರ ಶೀತ ವಾತಾವರಣವಿದ್ದು, ಹಲವಾರು ವಿಮಾನಗಳು ಹಾಗೂ ರೈಲುಗಳ ಸೇವೆ ವಿಳಂಬಗೊಂಡಿವೆ.
ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯ ಗಂಭೀರ ಸ್ವರೂಪಕ್ಕೆ ತಲುಪಿರುವುದರಿಂದ, ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ರವಿವಾರ ಬೆಳಗ್ಗೆ 7 ಗಂಟೆಯ ವೇಳೆಗೆ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ 439 ತಲುಪಿತ್ತು. ವಾಯು ಮಾಲಿನ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ GRAP-IV ಮಾನದಂಡಗಳಡಿ ಅತ್ಯಂತ ಕಟ್ಟುನಿಟ್ಟಿನ ವಾಯು ಮಾಲಿನ್ಯ ತಡೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ದಟ್ಟ ಮಂಜಿನ ಕಾರಣಕ್ಕೆ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಗಳು ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ಪ್ರಯಾಣ ಸಲಹಾಸೂಚಿಯನ್ನು ಬಿಡುಗಡೆ ಮಾಡಿವೆ. ವಿಮಾನಗಳ ಹಾರಾಟ ವಿಳಂಬವಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದೆ.





