ದಿಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ 30 ದಿನಗಳ ಪೆರೋಲ್ ಮೇಲೆ ಬಿಡುಗಡೆಗೊಂಡ ದೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್

ಗುರ್ಮೀತ್ ಸಿಂಗ್ (Photo: PTI)
ಹೊಸದಿಲ್ಲಿ: ಎರಡು ಅತ್ಯಾಚಾರ ಪ್ರಕರಣಗಳ ಸಂಬಂಧ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮಂಗಳವಾರ ಒಂದು ತಿಂಗಳ ಕಾಲ ಪೆರೋಲ್ ಮಂಜೂರು ಮಾಡಲಾಗಿದೆ.
ಫೆಬ್ರವರಿ 5ರಂದು ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಈ ಪೆರೋಲ್ ಮಂಜೂರಾಗಿದೆ.
ಹರ್ಯಾಣದ ಸುನರಿಯ ಜೈಲಿನಲ್ಲಿಡಲಾಗಿದ್ದ ಸಿಂಗ್ ರನ್ನು ಮಂಗಳವಾರ ಬೆಳಗ್ಗೆ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರ್ಮೀತ್ ಸಿಂಗ್ ಗೆ ದಿಲ್ಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ ಹಾಗೂ ಇನ್ನಿತರ ರಾಜ್ಯಗಳಲ್ಲಿ ಭಾರಿ ಸಂಖ್ಯೆಯ ಅನುಯಾಯಿಗಳಿದ್ದಾರೆ. ಹರ್ಯಾಣದ ಸಿರ್ಸಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ದೇರಾ ಸಚ್ಚಾ ಸೌಧ, ಫತೇಬಾದ್, ಕುರುಕ್ಷೇತ್ರ, ಕೈತಾಲ್ ಹಾಗೂ ಹಿಸಾರ್ ಸೇರಿದಂತೆ ರಾಜ್ಯದೆಲ್ಲೆಡೆ ಭಾರಿ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ.
ಹರ್ಯಾಣ ವಿಧಾನಸಭಾ ಚುನಾವಣೆ ಸಂದರ್ಭವೂ ಗುರ್ಮೀತ್ ರಾಮ್ ರಹೀಂ ಸಿಂಗ್ ಗೆ ಪೆರೋಲ್ ಮಂಜೂರಾಗಿತ್ತು.
2017ರಲ್ಲಿ ಅಪರಾಧಿ ಎಂದು ಘೋಷಣೆಯಾದ ನಂತರ, ಇದೇ ಪ್ರಥಮ ಬಾರಿಗೆ ಸಿರ್ಸಾದಲ್ಲಿನ ತಮ್ಮ ಆಶ್ರಮಕ್ಕೆ ಗುರ್ಮೀತ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಈ ಹಿಂದಿನ ಸಂದರ್ಭಗಳಲ್ಲಿ ಪೆರೋಲ್ ಮಂಜೂರಾದಾಗ ಗುರ್ಮೀತ್ ಸಿಂಗ್ ಅವರಿಗೆ ಉತ್ತರ ಪ್ರದೇಶದಲ್ಲಿನ ಬಾಘ್ಪಟ್ ನಲ್ಲಿರುವ ತಮ್ಮ ಆಶ್ರಮಕ್ಕೆ ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗಿತ್ತು.





