ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮತ್ತೆ 40 ದಿನಗಳ ಪೆರೋಲ್

ಗುರ್ಮೀತ್ ಸಿಂಗ್ (Photo: PTI)
ಚಂಡೀಗಢ: ಅತ್ಯಾಚಾರ ಪ್ರಕರಣವೊಂದರಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ 40 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ.
ಗುರ್ಮೀತ್ ಸಿಂಗ್ ‘ಫರ್ಲೊ’ (ದೀರ್ಘಾವಧಿ ಜೈಲು ಶಿಕ್ಷೆಗೆ ಗುರಿಯಾಗಿರುವವರಿಗೆ ಮಂಜೂರು ಮಾಡುವ ತಾತ್ಕಾಲಿಕ ಬಿಡುಗಡೆ) ಮೇಲೆ ಹರ್ಯಾಣದ ರೋಹ್ಟಕ್ ನ ಸುನಾರಿಯಾ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾನೆ.
57 ವರ್ಷದ ಗುರ್ಮೀತ್ ಸಿಂಗ್ ಅವರು 40 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದು, ಈ ವೇಳೆ ಡೇರಾದಲ್ಲಿ ತಂಗಲಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಿರ್ಸಾ ಆಶ್ರಮದಲ್ಲಿ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಗುರ್ಮೀತ್ ಸಿಂಗ್ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ದಿಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ, ಜನವರಿಯಲ್ಲಿ 30 ದಿನಗಳ ಪೆರೋಲ್ ಪಡೆದಿದ್ದ ಸಿಂಗ್, ಎಪ್ರಿಲ್ ತಿಂಗಳಲ್ಲೂ 21 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದ. ಇದಲ್ಲದೆ, ಕಳೆದ ವರ್ಷ ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಕೂಡಾ 30 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ.





