33% ಮೀಸಲಾತಿ ಹೊರತಾಗಿಯೂ ಮಹಿಳಾ ಪ್ರಾತಿನಿಧ್ಯ ಕಡಿಮೆ: ರಾಷ್ಟ್ರಪತಿ ಕಳವಳ

PC: x.com/ambedkariteIND
ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಂಬಂಧ ಮಹಿಳಾ ಮೀಸಲಾತಿ ಕಾಯ್ದೆ-2023ನ್ನು ಜಾರಿಗೆ ತರಲು ಸಂಸತ್ ಸಂವಿಧಾನಕ್ಕೆ ತಿದ್ದುಪಡಿ ತರುತ್ತಿರುವ ಹೊರತಾಗಿಯೂ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಮಹಿಳಾ ಪ್ರಾತಿನಿಧಿತ್ವ ತೀರಾ ಕಡಿಮೆ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕಳವಳ ವ್ಯಕ್ತಪಡಿಸಿದ್ದಾರೆ.
"ನಾರಿಶಕ್ತಿ ವಂದನ್ ಅಧಿನಿಯಮ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಮತ್ತು ಸಂವಿಧಾನ ರೂಪಿಸಿದ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಮಹಿಳೆಯರಿಗೆ ಸಂದ ಗೌರವ. ಆದಾಗ್ಯೂ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ನಾವು ಹಿಂದಿದ್ದೇವೆ" ಎಂದು ಸುಪ್ರೀಂಕೋರ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು. ಸುಪ್ರೀಂಕೋರ್ಟ್ಮ 33 ನ್ಯಾಯಮೂರ್ತಿಗಳ ಪೈಕಿ ಏಕೈಕ ನ್ಯಾಯಮೂರ್ತಿ ಮಹಿಳೆ.
ಸಿಜೆಐ ಸೂರ್ಯಕಾಂತ್ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರ ಸಮ್ಮುಖದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಆಡಳಿತದ ಈ ಎಲ್ಲ ಮೂರೂ ವಿಭಾಗಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಮನೋಭಾವ ಬದಲಾಗುವ ಅಗತ್ಯವಿದೆ. ಎಸ್ಬಿಸಿಎ ಪ್ರಸಿಡೆಂಟ್ ವಿಕಾಸ್ ಸಂಘದ ಅಂಕಿ ಅಂಶಗಳ ಪ್ರಕಾರ ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ತೀರಾ ಕಡಿಮೆ ಅಂದರೆ ಹೈಕೋರ್ಟ್ ಗಳಲ್ಲಿ ಶೇಕಡ 13ರಷ್ಟು ಮತ್ತ ವಿಚಾರಣಾ ನ್ಯಾಯಾಲಯಗಳಲ್ಲಿ ಶೇಕಡ 35ರಷ್ಟು ಮಾತ್ರ ಇದೆ ಎಂದು ಹೇಳಿದರು.







