ಮಹಾರಾಷ್ಟ್ರ | ವಿವಾದ ಸೃಷ್ಟಿಸಿದ ಫಡ್ನವೀಸ್ ಶಿವಾಜಿಗೆ ಗೌರವ ಸಲ್ಲಿಸುತ್ತಿರುವ 'ದೇವಭಾವು' ಜಾಹೀರಾತು

Photo: X/@RRPSpeaks
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು "ದೇವಭಾವು" ಎಂದು ಬಿಂಬಿಸಿ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಜಾಹೀರಾತುಗಳು ವಿವಾದಕ್ಕೆ ಕಾರಣವಾಗಿದೆ.
ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರನ್ನು ಜಾಹೀರಾತಿನಿಂದ ಹೊರಗಿಡಲಾಗಿದೆ. ಈ ಜಾಹೀರಾತುಗಳು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದೊಳಗಿನ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ.
ಮುಂಬೈನಲ್ಲಿ ಮರಾಠಾ ಮೀಸಲಾತಿ ಪ್ರತಿಭಟನೆಗಳ ಬಳಿಕ ಈ ಬಿರುಕು ಕಾಣಿಸಿಕೊಂಡಿದೆ. ಶಿಂಧೆ ಮತ್ತು ಪವಾರ್ ಇಬ್ಬರೂ ದೂರ ಸರಿದ ಕಾರಣ ಫಡ್ನವೀಸ್ ರಾಜಕೀಯವಾಗಿ ಪ್ರತ್ಯೇಕವಾಗಿ ಕಾಣಿಸಿಕೊಂಡರು. ಮುಖ್ಯಮಂತ್ರಿಯನ್ನು ಮಾತ್ರ ಕೇಂದ್ರೀಕರಿಸಿ ಪ್ರಕಟವಾದ ಜಾಹೀರಾತು ಮೈತ್ರಿಕೂಟದ ನಡುವಿನ ಬಿರುಕು ಕುರಿತು ಊಹಾಪೋಹವನ್ನು ತೀವ್ರಗೊಳಿಸಿದೆ.
ಶನಿವಾರ ಪ್ರಕಟವಾದ ಜಾಹೀರಾತಿನಲ್ಲಿ ಫಡ್ನವೀಸ್ ಛತ್ರಪತಿ ಶಿವಾಜಿ ಮಹಾರಾಜರಿಗೆ ಹೂವುಗಳನ್ನು ಅರ್ಪಿಸಿ ಅನಂತ ಚತುರ್ದಶಿಯಂದು ಗಣೇಶ ಪೂಜೆ ಮಾಡುವುದು ಕಂಡು ಬಂದಿದೆ. ಜಾಹೀರಾತಿನಲ್ಲಿ "ದೇವಭಾವು" ಎಂದು ಬರೆಯಲಾಗಿದೆ. ಆದರೆ ಮೈತ್ರಿಕೂಟದ ನಾಯಕರ ಬಗ್ಗೆ ಜಾಹೀರಾತಿನಲ್ಲಿ ಯಾವುದೇ ಉಲ್ಲೇಖವಿರಲಿಲ್ಲ. ಜಾಹೀರಾತಿನ ಪ್ರಾಯೋಜಕರು ಯಾರು ಎಂದು ಹೇಳದ ಕಾರಣ ಜಾಹೀರಾತಿನ ವೆಚ್ಚ ಕೂಡ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್, ಒಂದೇ ದಿನದಲ್ಲಿ 40 ರಿಂದ 50 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಶಿವಾಜಿ ಮಹಾರಾಜರ ಫೋಟೊವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಅವರು ಜಾಹೀರಾತಿನ ಹಣಕಾಸಿನ ಮೂಲವನ್ನು ಪ್ರಶ್ನಿಸಿದರು ಮತ್ತು ಕಪ್ಪು ಹಣದ ಬಳಕೆಯ ಬಗ್ಗೆಯೂ ಸುಳಿವು ನೀಡಿದರು.
“ಮಹಾರಾಷ್ಟ್ರವು ರೈತರ ಆತ್ಮಹತ್ಯೆ ಮತ್ತು ಭಾರೀ ಮಳೆಯಿಂದ ತತ್ತರಿಸಿರುವಾಗ ಈ ರೀತಿ ದುಂದು ವೆಚ್ಚ ನಾಚಿಕೆಗೇಡಿನದು. ಆರೆಸ್ಸೆಸ್ ನಾಗಪುರದ ಪ್ರಧಾನ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರ ಅಥವಾ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಅವರ ಮೇಲಿನ ಗೌರವವನ್ನು ಸಾಬೀತುಪಡಿಸಲಿ” ಎಂದು ಸಂಜಯ್ ರಾವತ್ ಹೇಳಿದರು.
ಈ ಮಧ್ಯೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಮ್ಮಲ್ಲಿ ಯಾವುದೇ ಆಂತರಿಕ ಪೈಪೋಟಿ ಇಲ್ಲ ಎಂದು ಪ್ರತಿಪಾದಿಸಿದರು. ಮಹಾಯುತಿ ಸರಕಾರದ ಅಡಿಯಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.







