ಏರ್ಬಸ್ A320 ವಿಮಾನಗಳಲ್ಲಿ ತುರ್ತಾಗಿ ಸಾಫ್ಟ್ವೇರ್ - ಹಾರ್ಡ್ವೇರ್ ಮಾರ್ಪಾಡು ಅಗತ್ಯ: DGCA ಆದೇಶ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಏರ್ಬಸ್ ಕಂಪೆನಿಯಿಂದ ಹೊರಬಿದ್ದ ತುರ್ತು ಸುರಕ್ಷತಾ ಎಚ್ಚರಿಕೆಯನ್ನು ಅನುಸರಿಸಿ ದೇಶದ ವಿಮಾನಯಾನ ಸಂಸ್ಥೆಗಳಿಗೆ DGCA ಶನಿವಾರ (ನ.29) ಮಹತ್ವದ ಆದೇಶ ಜಾರಿ ಮಾಡಿದೆ. ಏರ್ಬಸ್ A319, A320 ಹಾಗೂ A321 ಸರಣಿಯ ಕೆಲವು ವಿಮಾನಗಳು ಕಡ್ಡಾಯವಾಗಿರುವ ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಮಾರ್ಪಾಡುಗಳನ್ನು ಪೂರ್ಣಗೊಳಿಸುವವರೆಗೆ ಹಾರಾಟ ನಿರ್ವಹಣೆಗೆ ನಿಷೇಧಿಸಲಾಗಿದೆ.
ನಿಷೇಧ ರವಿವಾರ (ನ.30) ಬೆಳಗ್ಗೆ 5.30ರಿಂದ ಜಾರಿಯಾಗಲಿದ್ದು, ಸಂಸ್ಥೆಗಳು ತಮ್ಮ ವಿಮಾನಗಳನ್ನು ಸಣ್ಣ ವಿಮಾನ ನಿಲ್ದಾಣಗಳಿಂದ ನಿರ್ವಹಣಾ ಸೌಲಭ್ಯವಿರುವ ದೊಡ್ಡ ನಿಲ್ದಾಣಗಳಿಗೆ ಸ್ಥಳಾಂತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
DGCA ಆದೇಶದಲ್ಲಿ, “ಕಡ್ಡಾಯ ಮಾರ್ಪಾಡಿನ ವ್ಯಾಪ್ತಿಗೆ ಬರುವ ಯಾವುದೇ ವಿಮಾನವನ್ನು ನಿರ್ವಹಣೆ ಮಾಡಬಾರದು” ಎಂದು ಸ್ಪಷ್ಟಪಡಿಸಲಾಗಿದೆ.
ಏರ್ಬಸ್ ಶುಕ್ರವಾರ (ನ.28) ತಿಳಿಸಿದಂತೆ, A320 ಸರಣಿ ವಿಮಾನಗಳಲ್ಲಿ ಇತ್ತೀಚಿನ ಘಟನೆಯಲ್ಲಿ ತೀವ್ರ ಸೌರ ವಿಕಿರಣವು ಹಾರಾಟ ನಿಯಂತ್ರಣಕ್ಕೆ ಅಗತ್ಯವಾದ ಪ್ರಮುಖ ಡೇಟಾವನ್ನು ಹಾನಿಗೊಳಿಸಬಹುದೆಂಬ ಅಂಶ ಪತ್ತೆಯಾಗಿದೆ. ಅದರಂತೆ ಜಗತ್ತಿನಾದ್ಯಂತ ಸುಮಾರು 6,000 ವಿಮಾನಗಳಲ್ಲಿ ತುರ್ತು ಮಾರ್ಪಾಡುಗಳು ಅಗತ್ಯವಾಗಿವೆ ಎನ್ನಲಾಗಿದೆ.
ಇಂಡಿಗೋ ದೇಶದ ಅತಿದೊಡ್ಡ A320 ಸರಣಿ ವಿಮಾನ ನಿರ್ವಾಹಕವಾಗಿದ್ದು, 415 ವಿಮಾನಗಳಲ್ಲಿ 350 ಕ್ಕೂ ಹೆಚ್ಚು ವಿಮಾನಗಳು ಈ ಸರಣಿಯದ್ದೇ. ಏರ್ ಇಂಡಿಯಾದಲ್ಲಿ 127 ವಿಮಾನಗಳಿವೆ.
ಅಕಾಸಾ ಏರ್ ಮತ್ತು ಸ್ಪೈಸ್ಜೆಟ್ ಬೋಯಿಂಗ್ 737 ಗಳನ್ನೇ ಬಳಸುತ್ತಿರುವುದರಿಂದ ಹೆಚ್ಚೇನು ತೊಂದರೆ ಆಗಿಲ್ಲ.
ಇಂಡಿಗೋ ತನ್ನ 60% ವಿಮಾನಗಳಿಗೆ ಹಾಗೂ ಏರ್ ಇಂಡಿಯಾ 40% ವಿಮಾನಗಳಿಗೆ ಈಗಾಗಲೇ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಿದೆ.
ಸಾಫ್ಟ್ವೇರ್ ನವೀಕರಣಕ್ಕೆ ಪ್ರತಿ ವಿಮಾನಕ್ಕೆ ಸರಾಸರಿ ಎರಡು ಗಂಟೆಗಳು ಬೇಕಾಗುತ್ತದೆ. ಕೆಲ ಹಳೆಯ ವಿಮಾನಗಳಲ್ಲಿ ಹಾರ್ಡ್ವೇರ್ ಬದಲಾವಣೆ ಅಗತ್ಯವಿದ್ದು, ಅವು ಹಾರಾಟ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಇದಲ್ಲದೆ, ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಪೋರ್ಟಬಲ್ ಮೆಂಟೆನನ್ಸ್ ಆಕ್ಸೆಸ್ ಟರ್ಮಿನಲ್ ಉಪಕರಣ ಲಭ್ಯವಿಲ್ಲದಿರುವುದು ಈ ನವೀಕರಣ ಕಾರ್ಯ ಕೈಗೊಳ್ಳಲು ಸವಾಲಾಗಿದೆ.
ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಪ್ರಯಾಣ ಸೇವೆಗಳಲ್ಲಿ ವ್ಯತ್ಯಯ ಸಾಧ್ಯವೆಂದು ಈಗಾಗಲೇ ಎಚ್ಚರಿಕೆ ನೀಡಿವೆ.
ಏರ್ಬಸ್ ಹೇಳಿಕೆಯಲ್ಲಿ, “ಈ ಶಿಫಾರಸುಗಳು ಕಾರ್ಯಾಚರಣೆಗಳಿಗೆ ತೊಂದರೆ ಉಂಟುಮಾಡಲಿವೆ ಎಂಬುದು ನಮಗೆ ತಿಳಿದಿದೆ. ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ” ಎಂದು ಸ್ಪಷ್ಟಪಡಿಸಿದೆ.
ಅಕ್ಟೋಬರ್ 31 ರಂದು ಮೆಕ್ಸಿಕೋ–ನ್ಯೂವಾರ್ಕ್ ನಡುವಿನ ಜೆಟ್ಬ್ಲೂ A320 ವಿಮಾನದಲ್ಲಿ ಸುಮಾರು 4–5 ಸೆಕೆಂಡ್ಗಳ ಕಾಲ ಅನಿಯಂತ್ರಿತವಾಗಿ ಕೆಳಗಿಳಿಯಿತು. ಆಟೋ ಪೈಲೆಟ್ ವ್ಯವಸ್ಥೆಯು ಅದನ್ನು ಕೂಡಲೇ ಸರಿಪಡಿಸಿತ್ತು. ಆ ಬಳಿಕ ತನಿಖೆಯಲ್ಲಿ ELAC (Elevator and Aileron Computer) ಘಟಕದಲ್ಲಿದ್ದ ದೋಷವೇ ಕಾರಣವೆಂದು ದೃಢಪಟ್ಟಿತ್ತು.







