ವಿಮಾನಯಾನ ಸೇವೆ ವ್ಯತ್ಯಯ | ಇಂಡಿಗೋ ಸಂಸ್ಥೆಗೆ 22 ಕೋಟಿ ರೂ. ದಂಡ !

ಇಂಡಿಗೊ ವಿಮಾನ | Photo Credit : PTI
ಹೊಸದಿಲ್ಲಿ: ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಆಗಿರುವ ಭಾರಿ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ, ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ.
ಹೆಚ್ಚುವರಿಯಾಗಿ, ವಿಮಾನ ಸುರಕ್ಷತೆಯನ್ನು ವಿಸ್ಕೃತಗೊಳಿಸುವುದು ಹಾಗೂ ಪೈಲಟ್ ಹಾಗೂ ಸಿಬ್ಬಂದಿಯ ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಷರತ್ತಿಗಾಗಿ 50 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರೆಂಟಿ ನೀಡಬೇಕಾಗುತ್ತದೆ. ನಿಯಮಗಳ ಅನುಷ್ಠಾನದ ಬಳಿಕ ಈ ಹಣ ಬಿಡುಗಡೆ ಮಾಡಲಾಗುತ್ತದೆ.
ಸಂಸ್ಥೆಯ ಸಿಇಓ ಮತ್ತು ಸಿಓಓ ಸೇರಿದಂತೆ ಏರ್ ಲೈನ್ಸ್ ನ ಹಿರಿಯ ಅಧಿಕಾರಿಗಳಿಗೆ ನಿಯಂತ್ರಕ ಸಂಸ್ಥೆ ಎಚ್ಚರಿಕೆ ನೀಡಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಹುದ್ದೆಯಿಂದ ಕಿತ್ತುಹಾಕುವಂತೆಯೂ ಸೂಚಿಸಲಾಗಿದೆ.
"ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಆ ಹುದ್ದೆಯಿಂದ ಕಿತ್ತುಹಾಕುವ ಜತೆಗೆ ಭವಿಷ್ಯದಲ್ಲಿ ಯಾವುದೇ ಹೊಣೆಗಾರಿಕೆಯ ಹುದ್ದೆ ನೀಡಬಾರದು. ಲೋಪವನ್ನು ಪತ್ತೆ ಮಾಡಲು ಮತ್ತು ಡಿಜಿಸಿಎ ನಿಯಮಾವಳಿಯ ಅಡಿಯಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೊಳಿಸುವ ಸಂಬಂಧ ಆಂತರಿಕ ತನಿಖೆ ನಡೆಸುವಂತೆ ವಿಮಾನಯಾನ ಸಚಿವಾಲಯ ಆದೇಶ ನೀಡಿದೆ" ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಇಂಡಿಗೋ ವಿಮಾನಗಳ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ವರದಿಯನ್ನು ಶನಿವಾರ ರಾತ್ರಿ ನಿಯಂತ್ರಕ ಸಂಸ್ಥೆ ಬಿಡುಗಡೆ ಮಾಡಿದೆ.







