ಬೀಡ್ ಸರಪಂಚನ ಹತ್ಯೆ: ಧನಂಜಯ್ ಮುಂಡೆಗೆ ಹೆಚ್ಚಿದ ಸಂಕಷ್ಟ

ಧನಂಜಯ್ ಮುಂಡೆ | PC : PTI
ಮುಂಬೈ: ಮಹಾರಾಷ್ಟ್ರದ ಜನರನ್ನು ಬೆಚ್ಚಿ ಬೀಳಿಸಿದ್ದ ಬೀಡ್ ಸರಪಂಚ ಸಂತೋಷ್ ದೇಶ್ ಮುಖ್ ಹತ್ಯೆ ಪ್ರಕರಣದಲ್ಲಿ ತಮ್ಮ ನಿಕಟವರ್ತಿ ವಾಲ್ಮೀಕ್ ಕರಡ್ ಹತ್ಯೆಯ ಸೂತ್ರಧಾರಿ ಎಂಬ ಆರೋಪಗಳು ಕೇಳಿ ಬಂದಿರುವುದರಿಂದ, ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ನಾಯಕ ಧನಂಜಯ್ ಮುಂಡೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಲಿಗೆ ಮೊತ್ತದ ಬೇಡಿಕೆಯನ್ನು ಪ್ರತಿರೋಧಿಸಿದ್ದಕ್ಕೆ ಸಂತೋಷ್ ದೇಶ್ ಮುಖ್ ಹತ್ಯೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ.
ಸಂತೋಷ್ ದೇಶ್ ಮುಖ್ ಹತ್ಯೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನೆರಡು ಪ್ರಕರಣಗಳಲ್ಲಿ ರಾಜ್ಯ ಸಿಐಡಿ ಪೊಲೀಸರು ಬೀಡ್ ಜಿಲ್ಲೆಯ ನ್ಯಾಯಾಲಯವೊಂದಕ್ಕೆ 1,200 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸರಪಂಚ ಸಂತೋಷ್ ದೇಶ್ ಮುಖ್ ಹತ್ಯೆ, ಪವನ ವಿದ್ಯುತ್ ಕಂಪನಿ ಅವಾದ ಗ್ರೂಪ್ ನಿಂದ ಎರಡು ಕೋಟಿ ರೂ. ಗೆ ಬೇಡಿಕೆ ಹಾಗೂ ಆ ಕಂಪನಿಯ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಸೇರಿದಂತೆ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ಬೀಡ್ ಜಿಲ್ಲೆಯ ಕೇಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ನಂತರ ಈ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಐಡಿ, ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಈ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ವಿಶೇಷ ತನಿಖಾ ತಂಡ, ಕರಡ್ ಹಾಗೂ ಇನ್ನಿತರ ಆರೋಪಿಗಳ ವಿರುದ್ಧ ಮೋಕಾ ಕಾಯ್ದೆಯನ್ನು ಹೇರಿದೆ.
ಡಿಸೆಂಬರ್ 9, 2024ರಂದು ಮೂರು ಬಾರಿ ಸರಪಂಚರಾಗಿದ್ದ 45 ವರ್ಷದ ಸಂತೋಷ್ ದೇಶ್ ಮುಖ್ ರನ್ನು ಪಾರ್ಲಿ ತಾಲ್ಲೂಕಿನ ಮಸ್ಸಾಜೋಗ್ ಗ್ರಾಮದಿಂದ ಅಪಹರಿಸಿದ್ದ ದುಷ್ಕರ್ಮಿಗಳು, ಅವರಿಗೆ ಕಿರುಕುಳ ನೀಡಿ, ಹತ್ಯೆಗೈದಿದ್ದರು.
ಈ ಸಂಬಂಧ ರಾಜ್ಯ ಸಿಐಡಿ ಪೊಲೀಸರು ಕರಡ್ ಅಲ್ಲದೆ, ಸುದರ್ಶನ್ ಘುಲೆ, ವಿಷ್ಣು ಚಾತೆ, ಜೈರಾಮ್ ಚಾತೆ, ಮಹೇಶ್ ಕೇದಾರ್, ಸಿದ್ಧಾರ್ಥ ಸೋನಾವಾಲೆ, ಸುಧೀರ್ ಸಾಂಗಲೆ ಹಾಗೂ ಪ್ರತೀಕ್ ಘುಲೆ ಎಂಬುವವರನ್ನೂ ಬಂಧಿಸಿದ್ದರು. ಕೃಷ್ಣ ಅಂಧಾಳೆ ಈ ಪ್ರಕರಣದಲ್ಲಿ ವಾಂಟೆಡ್ ಆರೋಪಿಯಾಗಿದ್ದಾನೆ.
ಈ ನಡುವೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಧನಂಜಯ್ ಮುಂಡೆಯಿಂದ ರಾಜೀನಾಮೆ ಪಡೆಯಬೇಕು ಇಲ್ಲವೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯ, ಈ ಪ್ರಕರಣದಲ್ಲಿ ಮುಂಡೆಯನ್ನೂ ವಿಚಾರಣೆಗೊಳಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಬೀಡ್ ಜಿಲ್ಲೆಯ ಪಾರ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಧನಂಜಯ್ ಮುಂಡೆ, ಎನ್ಸಿಪಿ (ಅಜಿತ್ ಪವಾರ್ ಬಣ) ಮುಖ್ಯಸ್ಥ ಅಜಿತ್ ಪವಾರ್ ರ ಆಪ್ತರೆಂದೇ ಪರಿಗಣಿಸಲ್ಪಟ್ಟಿದ್ದಾರೆ.







