ಉಪ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡ ಧನ್ಕರ್ !

ಜಗದೀಪ್ ಧನ್ಕರ್ , ಸಿ.ಪಿ. ರಾಧಾಕೃಷ್ಣನ್ | PTI
ಹೊಸದಿಲ್ಲಿ, ಸೆ.12: ಉಪ ರಾಷ್ಟ್ರಪತಿ ಹುದ್ದೆಗೆ ಹಠಾತ್ ಹಾಗೂ ನಿಗೂಢವಾಗಿ ರಾಜೀನಾಮೆ ನೀಡಿದ್ದ ಜಗದೀಪ್ ಧನ್ಕರ್ ಅವರು ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ನಡೆದ ನೂತನ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಎಂ. ವೆಂಕಯ್ಯ ನಾಯ್ಡು ಅವರಂತಹ ಮಾಜಿ ಉಪ ರಾಷ್ಟ್ರಪತಿಗಳು ಸೇರಿದಂತೆ ಇತರ ಆಹ್ವಾನಿತ ಅತಿಥಿಗಳೊಂದಿಗೆ ಧನ್ಕರ್ ಅವರು ಕೂಡ ಸೇರಿದ್ದರು.
ಪತ್ನಿಯೊಂದಿಗೆ ಆಗಮಿಸಿದ ಧನ್ಕರ್ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ ಶಾಂತವಾಗಿ ಮಾತನಾಡುತ್ತಿರುವುದು ಕಂಡು ಬಂತು. ನೂತನವಾಗಿ ಆಯ್ಕೆಯಾಗಿರುವ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಸಮೀಪದ ಖುರ್ಚಿಯಲ್ಲಿ ಕುಳಿತುಕೊಂಡಿದ್ದ ಧನ್ಕರ್ ನಿರಾಳವಾಗಿರಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿರುವಂತೆ ಕಂಡು ಬಂತು. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರನ್ನು ಆಗಾಗ ನಗುತ್ತಾ ಸ್ವಾಗತಿಸುತ್ತಿರುವುದು ಕಂಡು ಬಂತು.
ನೂತನ ಉಪ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ಮಾಜಿ ಉಪ ರಾಷ್ಟ್ರಪತಿಗಳನ್ನು ಆಹ್ವಾನಿಸುವುದು ಸಂಪ್ರದಾಯ. ಈ ಸಂಪ್ರದಾಯಕ್ಕೆ ಅನುಗುಣವಾಗಿ ಧನ್ಕರ್ ಅವರನ್ನು ಕೂಡ ಆಹ್ವಾನಿಸಲಾಗಿತ್ತು.
ಈ ವರ್ಷ ಜುಲೈಯಲ್ಲಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಧನ್ಕರ್ ಅವರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರು ಅವರಷ್ಟಕ್ಕೇ ಇದ್ದರು. ಕೆಲವು ಮಾಧ್ಯಮ ವರದಿಗಳು ಅವರು ಬಿಡುವಿನ ವೇಳೆಯನ್ನು ಟೇಬಲ್ ಟೆನ್ನಿಸ್ ಆಟ ಆಡುತ್ತಾ ಕಳೆಯುತ್ತಿದ್ದಾರೆ ಎಂದು ಹೇಳಿದ್ದವು.
ಉಪ ರಾಷ್ಟ್ರಪತಿ ಚುನಾವಣೆಗೆ ಕೆಲವು ದಿನಗಳ ಮುನ್ನ ಅವರು ರಾಜಕೀಯ ನಾಯಕರ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿತ್ತು.







