ʼಹೇಮಾಮಾಲಿನಿ ಗೆಲ್ಲದಿದ್ದರೆʼ ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ!

ಧರ್ಮೇಂದ್ರ | PC : NDTV
ಮುಂಬೈ,ನ.24: ಹಿರಿಯ ನಟ,ಬಾಲಿವುಡ್ನ ‘ಹಿ-ಮ್ಯಾನ್’ ಮತ್ತು ‘ಧರಮ್ ಪಾಜಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಧರ್ಮೇಂದ್ರ ಅವರು ಸೋಮವಾರ ಬೆಳಿಗ್ಗೆ ಇಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷಗಳಾಗಿದ್ದು,ಡಿ.8ರಂದು ತನ್ನ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದರು.
ಕರಣ ಜೋಹರ್,ಕಾಜೋಲ್,ಅಜಯ ದೇವಗನ್ ಮತ್ತು ಕರಿಷ್ಮಾ ಕಪೂರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಧರ್ಮೇಂದ್ರ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಧರ್ಮೇಂದ್ರ ಅವರ ನಿಧನದಿಂದಾಗಿ ಒಂದು ಯುಗವು ಅಂತ್ಯಗೊಂಡಿದೆ ಎಂದು ಜೋಹರ್ ತನ್ನ ಪೋಸ್ಟ್ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಆಗಾಗ್ಗೆ ಇಲ್ಲಿಯ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈ ತಿಂಗಳ ಆರಂಭದಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮನೆಯಲ್ಲಿಯೇ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲು ಅವರ ಕುಟುಂಬವು ನಿರ್ಧರಿಸಿತ್ತು.
ವಿಲೆಪಾರ್ಲೆಯ ಪವನಹಂಸ ಚಿತಾಗಾರದಲ್ಲಿ ದಿವಂಗತ ನಟನ ಅಂತ್ಯಸಂಸ್ಕಾರ ನೆರವೇರಿತು. ಕುಟುಂಬ ವರ್ಗದವರು ಮತ್ತು ಹಲವಾರು ಸೆಲೆಬ್ರಿಟಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಬಾಲಿವುಡ್ ನ ’ಹಿ-ಮ್ಯಾನ್’ ಎಂದೇ ಹೆಸರಾಗಿದ್ದ ಧರ್ಮೇಂದ್ರ ಅವರ ವೃತ್ತಿಜೀವನ ಆರು ದಶಕಗಳನ್ನೂ ಮೀರಿದ್ದು, ಭಾರತೀಯ ಚಿತ್ರರಂಗದಲ್ಲಿ ಶಾಶ್ವತ ಛಾಪನ್ನು ಮೂಡಿಸಿದೆ. ಅವರು ಕೊನೆಯ ಬಾರಿ ನಟಿಸಿರುವ ‘ಇಕ್ಕೀಸ್’ ಡಿ.25ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ.
ಇದಕ್ಕೂ ಮುನ್ನ 2024ರ ‘ತೇರಿ ಬಾತೋಂ ಮೆ ಐಸಾ ಉಲಝಾ ಜಿಯಾ’ ಚಿತ್ರದಲ್ಲಿ ಧರ್ಮೇಂದ್ರ ಕಾಣಿಸಿಕೊಂಡಿದ್ದರು.
ಧರ್ಮೇಂದ್ರ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಎರಡನೇ ಪತ್ನಿ ಹೇಮಾಮಾಲಿನಿ, ಮಕ್ಕಳಾದ ಸನ್ನಿ ಡಿಯೋಲ್,ಬಾಬಿ ಡಿಯೋಲ್,ಇಶಾ ಡಿಯೋಲ್,ಅಹನಾ ಡಿಯೋಲ್,ಅಜೀತಾ ಮತ್ತು ವಿಜೇತಾ ಅವರನ್ನು ಅಗಲಿದ್ದಾರೆ.
ಧರ್ಮೇಂದ್ರ 1960ರಲ್ಲಿ ‘ದಿಲ್ ಭಿ ತೇರಾ ಹಂ ಭಿ ತೇರೆ’ಚಿತ್ರದೊಂದಿಗೆ ತನ್ನ ಸಿನಿ ಪಯಣವನ್ನು ಆರಂಭಿಸಿದ್ದು,300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಶೋಲೆ,ಯಾದೋಂ ಕಿ ಬಾರಾತ್,ಮೇರಾ ಗಾಂವ್ ಮೇರಾ ದೇಶ,ನೌಕರ ಬೀವಿ ಕಾ,ಫೂಲ್ ಔರ್ ಪಥ್ಥರ್ ನಂತಹ ಹಲವಾರು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದರು.
ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗುರುತಿಸಿ 2012ರಲ್ಲಿ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ‘ಪದ್ಮಭೂಷಣ’ವನ್ನು ಪ್ರದಾನಿಸಲಾಗಿತ್ತು.
ನಟನೆಯೊಂದಿಗೆ ಚಿತ್ರ ನಿರ್ಮಾಣ ಮತ್ತು ರಾಜಕೀಯದಲ್ಲಿಯೂ ತೊಡಗಿಸಿಕೊಂಡಿದ್ದ ಅವರು 2004-09ರ ಅವಧಿಯಲ್ಲಿ ಬಿಕಾನೇರ್ನಿಂದ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.
ಪಂಜಾಬಿನ ಲೂಧಿಯಾನದ ಗ್ರಾಮದಲ್ಲಿ ಜನಿಸಿದ್ದ ಧರ್ಮೇಂದ್ರ 1954ರಲ್ಲಿ ತನ್ನ 19ರ ಪ್ರಾಯದಲ್ಲಿ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಬಳಿಕ ನಟಿ ಹೇಮಾಮಾಲಿನಿ ಅವರನ್ನು ಪ್ರೇಮವಿವಾಹವಾಗಿದ್ದರು.
ಧರ್ಮೇಂದ್ರ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತನ್ನ ಪ್ರತಿಭೆಯನ್ನು ಮೆರೆದಿದ್ದರು. ‘ಫೂಲ್ ಔರ್ ಪಥ್ಥರ್’ ಮತ್ತು ‘ಆಯೆ ದಿನ್ ಬಹಾರ್ ಕೆ’ಯಂತಹ ಚಿತ್ರಗಳಲ್ಲಿ ರೊಮ್ಯಾಂಟಿಕ್ ಹಿರೋ ಆಗಿದ್ದ ಅವರು ‘ಧರಮ್ ವೀರ್’ ಮತ್ತು ‘ಹುಕುಮತ್’ ಚಿತ್ರಗಳಲ್ಲಿ ಆ್ಯಕ್ಷನ್ ಸ್ಟಾರ್ ಆಗಿ ಅಷ್ಟೇ ಸಲೀಸಾಗಿ ನಟಿಸಿದ್ದರು. ರಮೇಶ್ ಸಿಪ್ಪಿಯವರ 1975ರ ಶೋಲೆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ‘ವೀರು’ ಪಾತ್ರವನ್ನು ನಿರ್ವಹಿಸುವ ಮೂಲಕ ಸಿನಿರಸಿಕರ ಮನದಲ್ಲಿ ಶಾಶ್ವತ ಛಾಪನ್ನು ಉಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೇಮಾಮಾಲಿನಿ, ಜಾಟ್ ಸಮುದಾಯದ ಜನರ ಬಳಿ ಮತಯಾಚನೆಗೆ ಹೋಗಿದ್ದರು. ಆಗ ಪತಿ ಧರ್ಮೇಂದ್ರ ಅವರು ಪತ್ನಿ ಹೇಮಾಮಾಲಿನಿ ಪರ ಭರ್ಜರಿ ಪ್ರಚಾರ ಮಾಡಿದ್ದರು. ಜಾಟ್ ಸಮುದಾಯಕ್ಕೆ ಸೇರಿದ್ದ ಧರ್ಮೇಂದ್ರ, ತಮ್ಮ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ರೋಡ್ ಶೋಗಳನ್ನು ನಡೆಸಿದ್ದರು. ಸೋನಕ್ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ಶೋಲೆ ಸಿನಿಮಾದಲ್ಲಿ ಹೇಮಾಮಾಲಿನಿಯ ಪ್ರೀತಿಯನ್ನು ಪಡೆಯಲು ನೀರಿನ ಟ್ಯಾಂಕ್ ಮೇಲೇರಿ, ‘ಜಿಗಿದು ಸಾಯುತ್ತೇನೆ’ ಎಂಬ ದೃಶ್ಯವನ್ನು ಪ್ರಚಾರ ಸಭೆಯಲ್ಲಿ ಉಲ್ಲೇಖಿಸಿ, ‘ಹೇಮಾಮಾಲಿನಿಯನ್ನು ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಾನು ನಿಮ್ಮ ಊರಿನ ಟ್ಯಾಂಕ್ ಮೇಲೆ ಏರಿ ಜಿಗಿದು ಸಾಯುತ್ತೇನೆ’ ಎಂದು ನಗೆಗಡಲಲ್ಲಿ ತೇಲಿಸಿದ್ದರು!







