ಧುರಂಧರ್ ಚಿತ್ರದ ವಿರುದ್ಧ ಸುಳ್ಳು ಪ್ರಚಾರಾಭಿಯಾನ ಎಂದು ಟೀಕಿಸಿದ ಧ್ರುವ್ ರಾಠಿ; ಸಿನಿಮಾವನ್ನು ಸಮರ್ಥಿಸಿಕೊಂಡ ನಟರು

PC: IMDb
ಹೊಸದಿಲ್ಲಿ: ಒಂದೆಡೆ ವೀಡಿಯೋ ಬ್ಲಾಗರ್ ಧ್ರುವ್ ರಾಠಿ ‘ಧುರಂಧರ್’ ಸಿನಿಮಾದ ರಾಜಕೀಯ ಸಂದೇಶವನ್ನು ‘ಸುಳ್ಳು ಪ್ರಚಾರಾಭಿಯಾನ” ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ ಸಿನಿಮಾದಲ್ಲಿ ನಟಿಸಿದ ಅಂಕಿತ್ ಸಾಗರ್ ಮತ್ತು ಡ್ಯಾನಿಷ್ ಪಾಂಡರ್ ಸಿನಿಮಾದ ಸಂದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ರಣ್ವೀರ್ ಸಿಂಗ್ ನಟಿಸಿರುವ ಸಿನಿಮಾ ತನ್ನ ಬಿಗಿಯಾದ ನಿರೂಪಣೆ ಮತ್ತು ಸಾಹಸಕ್ಕೆ ಪ್ರಶಂಸೆ ಗಳಿಸಿದೆ. ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ರೂ 800 ಕೋಟಿಗೂ ಹೆಚ್ಚು ಲಾಭಗಳಿಸಿದೆ. ಆದರೆ ಅದರ ರಾಜಕೀಯ ನಿರೂಪಣೆ ಮತ್ತು ನಿಜ ಜೀವನದ ಘಟನೆಗಳನ್ನು ನಿರೂಪಿಸಿರುವ ರೀತಿಗೆ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ.
ಮೂರು ಭಯೋತ್ಪಾದನಾ ಅಧ್ಯಾಯಗಳಾದ 1999ರ ಐಸಿ 814 ಹೈಜಾಕ್, 2001ರ ಸಂಸತ್ತಿನ ದಾಳಿ ಮತ್ತು 2008ರ ನವೆಂಬರ್ 11ರ ಮುಂಬೈ ದಾಳಿಯ ಪ್ರಕರಣಗಳನ್ನು ಬಿಂಬಿಸಿರುವ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ. ಈ ಮೊದಲು ನಟ ಹೃತಿಕ್ ರೋಶನ್ ‘ಧುರಂಧರ್’ ಸಿನಿಮಾವನ್ನು ಪ್ರಶಂಸಿಸಿದರೂ, ಅದರಲ್ಲಿನ ರಾಜಕೀಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
‘ಧುರಂಧರ್’ ಬಗ್ಗೆ ಧ್ರುವ್ ರಾಠಿ ಏನು ಹೇಳಿದ್ದಾರೆ?
ಇದೀಗ ವೀಡಿಯೊ ಬ್ಲಾಗರ್ ಧ್ರುವ್ ರಾಠಿ ಆಧಿತ್ಯ ಧರ್ ಸಿನಿಮಾ ಕುರಿತು ಹೊಸ ವೀಡಿಯೊ ಪ್ರಸಾರ ಮಾಡಿದ್ದಾರೆ. “ಧುರಂಧರ್ ನಿರ್ದೇಶಕ ಆದಿತ್ಯ ಧರ್ ಸಿನಿಮಾದಲ್ಲಿ ಸುಳ್ಳು ತುಂಬಿದ್ದಾರೆ ಮತ್ತು ಅಸಂಬದ್ಧ ಪ್ರಚಾರಾಭಿಯಾನವನ್ನು ಮಾಡುತ್ತಿದ್ದಾರೆ” ಎಂದು ಧ್ರುವ್ ರಾಠಿ ಹೇಳಿದ್ದಾರೆ. ಇದಕ್ಕೆ ಮೊದಲು ಟ್ರೈಲರ್ ಹೊರಬಂದಿದ್ದಾಗಲೂ ಧ್ರುವ್ ಅವರು ಸಿನಿಮಾದಲ್ಲಿನ ಹಿಂಸೆಯನ್ನು ಟೀಕಿಸಿದ್ದರು.
ಧ್ರುವ್ ರಾಠಿ ಸಿನಿಮಾವನ್ನು ಅಪಾಯಕಾರಿ ಎಂದು ಹೇಳಿದ್ದಾರೆ. “ಚೆನ್ನಾಗಿ ನಿರೂಪಿಸಲಾದ ಪ್ರಚಾರಾಭಿಯಾನ ಅತಿ ಅಪಾಯಕಾರಿ. ‘ದ ತಾಜ್ ಸ್ಟೋರಿ’ ಮತ್ತು ‘ಬಂಗಾಳಿ’ ಸಿನಿಮಾಗಳು ಅಪಾಯಕಾರಿಯಲ್ಲ, ಏಕೆಂದರೆ ಅವುಗಳು ಕೆಟ್ಟ ಸಿನಿಮಾಗಳಾಗಿದ್ದವು. ಆದರೆ ‘ಧುರಂಧರ್’ ಜನರನ್ನು ತೊಡಗಿಸಿಕೊಳ್ಳುತ್ತಿರುವ ಸಿನಿಮಾ. ರಣ್ವೀರ್ ಸಿಂಗ್ ಸಿನಿಮಾ ‘ಕಾಲ್ಪನಿಕ’ ಎಂದು ಹೇಳಿಕೊಳ್ಳುತ್ತಿದ್ದರೂ, ಅದೊಂದು ಸಿನಿಮಾ ಮಾತ್ರವಲ್ಲ. ಸಮಸ್ಯೆ ಏನೆಂದರೆ, ಸಿನಿಮಾ ಪದೇಪದೆ ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿರುವುದಾಗಿ ತೋರಿಸುತ್ತದೆ. ತನ್ನ ಟ್ರೈಲರ್ನಲ್ಲೂ ಅದನ್ನೇ ಹೇಳಿದೆ. 26/11 ದಾಳಿಯನ್ನು ತೋರಿಸುವಾಗ ಭಯೋತ್ಪಾದಕರ ನಡುವಿನ ನೈಜ ಆಡಿಯೋ ರೆಕಾರ್ಡಿಂಗ್ ಗಳನ್ನು ತೋರಿಸಲಾಗಿದೆ. ಪಾಕಿಸ್ತಾನದ ಲ್ಯಾರಿಯಲ್ಲಿರುವ ನೈಜ ಗ್ಯಾಂಗ್ ಸ್ಟರ್ ಗಳು ಮತ್ತು ಪೊಲೀಸರನ್ನು ತೋರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
‘ಧುರಂಧರ್’ ಸಿನಿಮಾ ಒಂದು ಗುಪ್ತಚರನ ಕತೆ ಇರುವ ಸಿನಿಮಾ. ಪಾಕಿಸ್ತಾನದ ಗ್ಯಾಂಗ್ ಗಳ ಜೊತೆಗೂಡಿದ ಗೂಢಾಚಾರ ಭಯೋತ್ಪಾದನಾ ಜಾಲವನ್ನು ಅದರೊಳಗಿದ್ದುಕೊಂಡೇ ತೊಡೆದುಹಾಕಲು ಪ್ರಯತ್ನಿಸುತ್ತಾನೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾ 16 ದಿನಗಳಲ್ಲಿ 800 ಕೋಟಿ ರೂ. ಲಾಭ ಮಾಡಿದೆ.
►ಭಾರತದ ಸ್ಥಿತಿ ಎಂದ ಅಂಕಿತ್ ಸಾಗರ್
ನಟ ಅಂಕಿತ್ ಸಾಗರ್ ಸಿನಿಮಾದಲ್ಲಿ ಜಾವೆನ್ ಖಾನಾನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಮಾಧವನ್ ಪಾತ್ರವು ಭಾರತದ NSA (ರಾಷ್ಟ್ರೀಯ ಭದ್ರತಾ ಏಜೆನ್ಸಿ) ಮುಖ್ಯಸ್ಥ ಅಜಿತ್ ದೋವಲ್ ಮೇಲೆ ರೂಪಿಸಲಾಗಿದೆ. ಆ ಪಾತ್ರವು, “ಒಬ್ಬ ಹಿಂದೂಸ್ತಾನಿ ಮತ್ತೊಬ್ಬ ಹಿಂದೂಸ್ತಾನಿಯ ಶತ್ರು” ಎನ್ನುವ ಸಂಭಾಷಣೆಯಿದೆ. ಇದು ಧರ್ ಅಜೆಂಡಾವನ್ನು ತೋರಿಸುತ್ತದೆ. ನಟ ಅಂಕಿತ್ ತಾನು ರಾಜಕೀಯದಿಂದ ದೂರವಾಗಿರುವುದಾಗಿ ಹೇಳಿದರೂ, “ಭಾರತದಲ್ಲಿ ಈಗಿನ ಸ್ಥಿತಿ ಹಾಗಿದೆ. ಇದನ್ನು ಬಹಳ ಸಂಶೋಧನೆ ಮಾಡಿ ನಿರ್ದೇಶಕರು ತೋರಿಸಿರಬಹುದು. ನೋಟು ಅಮಾನ್ಯೀಕರಣ ಆಗಿದೆ. ಏನೋ ಕಾರಣ ಇರಬಹುದು. ದೇಶದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಏನೋ ಸಂಭವಿಸಿರಬಹುದು” ಎಂದು ಹೇಳಿದ್ದಾರೆ.
►26/11 ಅನ್ನು ನೀವು ಸುಳ್ಳೆಂದು ಹೇಳಲಾಗದು ಎಂದ ನಟ
ರಾಜಕೀಯ ನಿರೂಪಣೆಯ ಬಗ್ಗೆ ಅನೇಕರು ಅಧಿತ್ಯ ಧರ್ ಸಿನಿಮಾವನ್ನು ಟೀಕಿಸಿದ್ದಾರೆ. ಹೃತಿಕ್ ಅವರೂ ರಾಜಕೀಯ ನಿರೂಪಣೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ರೆಹಮಾನ್ ಡಕಾಯಿತ್ ಸೋದರ ಸಂಬಂಧಿ ಉಜೈರ್ ಬಲೋಚ್ ಪಾತ್ರ ನಿರ್ವಹಿಸಿದ ನಟ ಡ್ಯಾನಿಷ್ ಪಾಂಡರ್ India TV ಜೊತೆಗೆ ಮಾತುಕತೆಯಲ್ಲಿ, “ಇದು ಬಹಳ ವಿಷಯಾತ್ಮಕವಾಗಿದೆ. ನಿಮಗೆ ಕೆಲವು ಇಷ್ಟವಾಗಬಹುದು ಮತ್ತು ನನಗೆ ಇಷ್ಟವಾಗದೆ ಇರಬಹುದು. ಇವುಗಳೆಲ್ಲ ಸಂಶೋಧನೆಯಿಂದ ತಿಳಿದು ಬಂದ ವಿಷಯ. 26/11 ಆಗಿರುವುದನ್ನು ನೀವು ತಡೆಯಲಾಗದು. ಪರದೆಯ ಮೇಲೆ ಭಯೋತ್ಪಾದಕರ ಧ್ವನಿಗಳಿವೆ. ಅದು ನಿಮಗೆ ಬಹಳ ಆತಂಕ ತರುತ್ತದೆ ಮತ್ತು ಹತಾಶೆಯನ್ನು ಉಂಟು ಮಾಡುತ್ತದೆ. ಅದೇ ಅವರು ಮಾಡಿರುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಆ ಸಂದರ್ಭದಲ್ಲಿ ಭಯೋತ್ಪಾದಕರ ಕೈಗೆ ಸಿಲುಕಿದ ಸಂತ್ರಸ್ತರ ಬಗ್ಗೆ ಅನುಭೂತಿ ಮೂಡುತ್ತದೆ. ಬಹಳಷ್ಟು ಸಂತ್ರಸ್ತರು ಇದ್ದರು. ನಾವು ಮಾಧ್ಯಮದಲ್ಲಿ ನೋಡುತ್ತಿದ್ದಂತೆಯೇ ಎಲ್ಲವೂ ನಡೆಯುತ್ತದೆ. ಸಂತ್ರಸ್ತರ ಪಾಡು ಏನೆಂದು ನಮಗೆ ಅರ್ಥವಾಗುವುದಿಲ್ಲ. ಆದರೆ ಧ್ವನಿ ಸುರುಳಿಗಳನ್ನು ಕೇಳಿದಾಗ ತಕ್ಷಣ ಅನುಭೂತಿ ವ್ಯಕ್ತವಾಗುತ್ತದೆ. ನೀವು ಆ ಸ್ಥಾನದಲ್ಲಿದ್ದರೆ ಏನಾಗುತ್ತಿತ್ತು? ಅನುಭೂತಿ ಪ್ರಕಟಿಸುವುದು ಅತಿ ಮುಖ್ಯವಾಗುತ್ತದೆ” ಎನ್ನುತ್ತಾರೆ ಡ್ಯಾನಿಷ್.







