ಹೆಚ್ಚುತ್ತಿರುವ ʼಡಿಜಿಟಲ್ ಅರೆಸ್ಟ್ʼ ವಂಚನೆ ಪ್ರಕರಣ: ಕೇಂದ್ರ ಸರಕಾರ, ಸಿಬಿಐಗೆ ಸುಪ್ರೀಂನಿಂದ ನೋಟಿಸ್

ಸುಪ್ರೀಂ ಕೋರ್ಟ್ | Photo Credit : PTI
ಹೊಸ ದಿಲ್ಲಿ: ʼಡಿಜಿಟಲ್ ಅರೆಸ್ಟ್ʼ ವಂಚನೆಗೆ ಬಲಿಯಾಗಿ ಹಿರಿಯ ನಾಗರಿಕರು ತಮ್ಮ ಉಳಿತಾಯದ ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಶುಕ್ರವಾರ ಕೇಂದ್ರ ಸರಕಾರ, ಸಿಬಿಐ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ದೇಶಾದ್ಯಂತ ಇಂತಹ ಅಪರಾಧಗಳು ಯಾವ ಸ್ವರೂಪದಲ್ಲಿ ಜರುಗಿವೆ ಎಂಬುದರ ಕುರಿತು ನ್ಯಾಯಾಲಯಕ್ಕೆ ನೆರವು ನೀಡುವಂತೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿತು.
ಇದೇ ವೇಳೆ, ನೆಲದ ಕಾನೂನಲ್ಲದೆ, ನ್ಯಾಯಾಂಗ ವ್ಯವಸ್ಥೆ ಬಗೆಗಿನ ಸಾರ್ವಜನಿಕರ ವಿಶ್ವಾಸದ ಮೂಲ ಬುನಾದಿಗೇ ಧಕ್ಕೆಯಾಗುವಂತೆ ವಂಚಕರು ನ್ಯಾಯಾಲಯ ಪ್ರಾಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿಯನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಸೆಪ್ಟೆಂಬರ್ 3, 2025ರಿಂದ ಸೆಪ್ಟೆಂಬರ್ 16, 2025ರ ನಡುವೆ ನಡೆದ ಡಿಜಿಟಲ್ ಅರೆಸ್ಟ್ ಹಗರಣದಲ್ಲಿ ತಾವು ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಕಳೆದುಕೊಂಡಿದ್ದೇವೆ ಎಂದು ಅಂಬಾಲದ ಹಿರಿಯ ನಾಗರಿಕ ದಂಪತಿಗಳು ಸಲ್ಲಿಸಿದ್ದ ದೂರನ್ನು ಆಧರಿಸಿ, ಈ ಕ್ಷಿಪ್ರ ಸ್ವಯಂಪ್ರೇರಿತ ರಿಟ್ ಅರ್ಜಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿತು.
“ಸಿಬಿಐ ಅಧಿಕಾರಿಗಳು ಹಾಗೂ ಇನ್ನಿತರ ಪ್ರಾಧಿಕಾರಗಳ ಸೋಗಿನಲ್ಲಿ ದೂರವಾಣಿ ಹಾಗೂ ವಿಡಿಯೊ ಕರೆ ಮೂಲಕ ವಂಚಕರು ತಮ್ಮನ್ನು ಸಂಪರ್ಕಿಸಿದರು ಎಂದು ಸಂತ್ರಸ್ತರು ಹೇಳಿದ್ದಾರೆ. ವಂಚಕರು ವಾಟ್ಸ್ ಆ್ಯಪ್ ಹಾಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ದ್ದೆಂದು ಹೇಳಲಾದ ಆದೇಶವನ್ನು ಪ್ರದರ್ಶಿಸಿದ್ದು, ಬಂಧನ ಹಾಗೂ ಆಸ್ತಿ ಮುಟ್ಟುಗೋಲು ಬೆದರಿಕೆಯನ್ನೊಡ್ಡಿ, ಸಂತ್ರಸ್ತರಿಂದ ವಿವಿಧ ಬ್ಯಾಂಕ್ ವಹಿವಾಟುಗಳ ಮೂಲಕ 1.50 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾರೆ” ಎಂಬುದರತ್ತ ನ್ಯಾಯಾಲಯ ಬೊಟ್ಟು ಮಾಡಿತು.
“ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತ್ವರಿತ ತನಿಖೆ ನಡೆಸುವಂತೆ ಹಾಗೂ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ರಾಜ್ಯ ಪೊಲೀಸರಿಗೆ ಸೂಚಿಸಲಾಗುತ್ತದೆ. ಆದರೆ, ದಾಖಲೆಗಳ ತಿರುಚುವಿಕೆ ಮತ್ತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ ಹೆಸರು, ಮುದ್ರೆ ಹಾಗೂ ನ್ಯಾಯಾಂಗ ಪ್ರಾಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತೀವ್ರ ಕಳವಳಕಾರಿಯಾಗಿದೆ” ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.







