Digital Arrest | Delhiಯ ವೃದ್ಧ ದಂಪತಿಗೆ 14 ಕೋಟಿ ರೂ. ವಂಚನೆ

photo credit: PTI
ಹೊಸದಿಲ್ಲಿ, ಜ.11: ದಿಲ್ಲಿಯ ಗ್ರೇಟರ್ ಕೈಲಾಷ ನಿವಾಸಿಗಳಾಗಿರುವ ವೃದ್ಧ ವೈದ್ಯ ದಂಪತಿಯನ್ನು ಎರಡು ವಾರಗಳಿಗೂ ಅಧಿಕ ಸಮಯ ‘ಡಿಜಿಟಲ್ ಬಂಧನ’ದಲ್ಲಿರಿಸಿದ್ದ ಸೈಬರ್ ಕ್ರಿಮಿನಲ್ಗಳು ಅವರಿಗೆ ಸುಮಾರು 14 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಡಿ.24ರಿಂದ ಜ.9ರ ನಡುವೆ ಈ ವಂಚನೆ ನಡೆದಿದ್ದು, ಕಾನೂನು ಜಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಆರೋಪಿಗಳು ಬಲವಂತದಿಂದ ದಂಪತಿಯಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.
ಶನಿವಾರ ಈ ಬಗ್ಗೆ E-FIR ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸ್ನ ಸೈಬರ್ ಅಪರಾಧ ಘಟಕವು ತನಿಖೆ ನಡೆಸುತ್ತಿದೆ.
ಅಮೆರಿಕದಿಂದ ಮರಳಿದ್ದ ವೈದ್ಯ ದಂಪತಿ 2016ರಿಂದ ಗ್ರೇಟರ್ ಕೈಲಾಷದಲ್ಲಿ ವಾಸವಾಗಿದ್ದು, ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ.
ಮನೆಯಲ್ಲಿ ದಂಪತಿ ಮಾತ್ರ ವಾಸವಾಗಿರುವುದನ್ನು ಗಮನಿಸಿದ್ದ ಆರೋಪಿಗಳು ಪದೇಪದೇ ಅವರಿಗೆ ಬಂಧನ ಮತ್ತು ಕಾನೂನು ಕ್ರಮದ ಬೆದರಿಕೆ ಒಡ್ಡಿದ್ದರು. ದಂಪತಿಯ ಮೇಲೆ ಒತ್ತಡ ಹೇರಿ ಅವರು ತಮ್ಮೊಂದಿಗೆ ನಿರಂತರವಾಗಿ ಫೋನ್ ಮತ್ತು ವೀಡಿಯೊ ಕರೆಗಳಲ್ಲಿರುವಂತೆ ನೋಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.
ಜ.9ರಂದು ಕರೆಗಳು ಬರುವುದು ನಿಂತಾಗ ತಾವು ಮೋಸ ಹೋಗಿದ್ದೇವೆ ಎನ್ನುವುದು ದಂಪತಿಗೆ ಗೊತ್ತಾಗಿದ್ದು, ಬಳಿಕ ಅವರು ಪೊಲೀಸರಿಗೆ ವಂಚನೆ ಕುರಿತು ದೂರು ಸಲ್ಲಿಸಿದ್ದಾರೆ.







