‘ಡಿಜಿಟಲ್ ಬಂಧನ’ ಹಗರಣ | ಗುಜರಾತ್ ವೈದ್ಯೆಯಿಂದ 19 ಕೋಟಿ ರೂ. ದೋಚಿದ ಸೈಬರ್ ವಂಚಕರು!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜು.31: ಕೇವಲ 90 ದಿನಗಳಲ್ಲಿ ಗುಜರಾತ್ ನ ವೈದ್ಯೆಯೊಬ್ಬರನ್ನು, ಸೈಬರ್ ವಂಚಕರು ‘ಡಿಜಿಟಲ್ ಬಂಧನ’ಕ್ಕೆ ಒಳಪಡಿಸಿ ಅವರಿಂದ 19 ಕೋಟಿ ರೂ.ಗೂ ಅಧಿಕ ಹಣವನ್ನು ಲಪಟಾಯಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಈ ವರ್ಷದ ಮಾರ್ಚ್ ನಲ್ಲಿ ವೈದ್ಯೆಗೆ, ಜ್ಯೋತಿ ವಿಶ್ವನಾಥ್ ಎಂಬ ಹೆಸರಿನಲ್ಲಿ ಫೋನ್ ಕರೆ ಬಂದಿತ್ತು. ತಾನು ದೂರವಾಣಿ ಸಂಪರ್ಕ ಇಲಾಖೆಯ ಅಧಿಕಾರಿಯೆಂದು ಪರಿಚಯಿಸಿಕೊಂಡ ಆಕೆ, ಅಶ್ಲೀಲ ಕಂಟೆಂಟ್ಗಳನ್ನು ಕಳುಹಿಸಲು ವೈದ್ಯೆಯ ಮೊಬೈಲ್ ಫೋನನ್ನು ಬಳಸಿಕೊಳ್ಳಲಾಗಿದೆ ಎಂದು ಆಪಾದಿಸಿದ್ದಳು.
ಬಳಿಕ ಸಬ್ ಇನ್ಸ್ ಪೆಕ್ಟರ್ ಮೋಹನ್ ಸಿಂಗ್,ಪಬ್ಲಿಕ್ ಪ್ರಾಸಿಕ್ಯೂಟರ್ ಗಳಾದ ದೀಪಕ್ ಸೈನಿ ಹಾಗೂ ವೆಂಕಟೇಶ್ವರ್, ನೋಟರಿ ಅಧಿಕಾರಿ ಪವನ್ ಕುಮಾರ್ ಎಂಬುದಾಗಿ ತಮ್ಮನ್ನು ಪರಿಚಯಿಸಿಕೊಂಡ ವ್ಯಕ್ತಿಗಳು ಕೂಡಾ ಸೇರಿಕೊಂಡು ವೈದ್ಯೆಯು ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಆಪಾದಿಸಿದರು. ಇದಕ್ಕಾಗಿ ಆಕೆ ಕಾನೂನುಕ್ರಮಕ್ಕೆ ಒಳಗಾಗಬೇಕಾದೀತ್ತೆಂದು ಬೆದರಿಸಿದ್ದರು ಮತ್ತು ಆಕೆಯ ಆಧಾರ್ ಕಾರ್ಡ್ ವಿವರಗಳನ್ನು ಕೂಡಾ ಪಡೆದುಕೊಂಡಿದ್ದರು. ತನಿಖೆ ಪೂರ್ಣಗೊಳ್ಳುವವರೆಗೆ ಆಕೆಯ ಬಳಿಯಿರುವ ಹಣವನ್ನು ತಾವು ಸೂಚಿಸಿದ ಖಾತೆಗಳಲ್ಲಿ ಇರಿಸುವಂತೆ ಸೂಚಿಸಿದ್ದರು. ತನಿಖೆ ಪೂರ್ಣಗೊಂಡ ಬಳಿಕ ಹಣವನ್ನು ಮರಳಿಸಲಾಗುವುದೆಂದು ಹೇಳಿದ್ದರು. ಭಯಭೀತರಾದ ವೈದ್ಯೆ, ಸೈಬರ್ ವಂಚಕರ ಬೇಡಿಕೆಯಂತೆ ಸುಮಾರು 35 ಪ್ರತ್ಯೇಕ ಖಾತೆಗಳಿಗೆ, ತಾನು ಜೀವಮಾನವಿಡೀ ಉಳಿತಾಯ ಮಾಡಿ ಕೂಡಿಟ್ಟಿದ್ದ 19 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಳು. ಅಲ್ಲಿಗೆ ನಿಲ್ಲದ ಸೈಬರ್ ವಂಚಕರು ಆಕೆಯಿಂದ ಚಿನ್ನವನ್ನು ಅಡವಿರಿಸಿ, ಹಣವನ್ನು ಕೂಡಾ ಕಬಳಿಸಿದ್ದರು.
ಕೊನೆಗೂ ತಾನು ಮೋಸಹೋಗಿರುವುದು ಅರಿವಾದ ವೈದ್ಯೆ, ಗುಜರಾತ್ ಸಿಐಡಿಯ ಸೈಬರ್ ಸೆಲ್ ಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಆರಂಭಿಸಿದ ಸಿಐಡಿ ಪೊಲೀಸರು ಸೂರತ್ ನಿಂದ 30 ವರ್ಷ ವಯಸ್ಸಿನ ಲಾಲ್ ಜಿ ಬಲ್ದಾನಿಯಾ ಎಂಬಾತನನ್ನು ಬಂಧಿಸಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಈತ ಸೈಬರ್ ವಂಚನಾ ಜಾಲದಲ್ಲಿ ಶಾಮೀಲಾಗಿದ್ದನೆಂದು ಆರೋಪಿಸಲಾಗಿದೆ. ‘ಮುರಳೀಧರ್ ಮ್ಯಾನುಫ್ಯಾಕ್ಚರಿಂಗ್’ ಎಂಬ ಹೆಸರಿನಲ್ಲಿರುವ ಈ ಬ್ಯಾಂಕ್ ಖಾತೆಗೆ ವೈದ್ಯೆಯಿಂದ 1 ಕೋಟಿ ರೂ. ಪಾವತಿಯಾಗಿತ್ತು.
ಬಲ್ದಾನಿಯಾನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ತಾನು ಉತ್ತರಪ್ರದೇಶದ ನೊಯ್ಡಾದಲ್ಲಿರುವ ವಂಚಕರ ಜೊತೆ ಸಂಪರ್ಕಕ್ಕೆ ಬಂದಿದ್ದು, ಹಣವನ್ನು ಸ್ವೀಕರಿಸಲು ತನ್ನ ಖಾತೆಯನ್ನು ಬಳಸುವುದಕ್ಕೆ ಅವರಿಗೆ ಅನುಮತಿ ನೀಡಿದ್ದಾಗಿ ತಿಳಿಸಿದ್ದಾನೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.







