ಡಿಜಿಟಲ್ ಅರೆಸ್ಟ್ | ಮುಂಬೈ ಪೊಲೀಸರ ಸೋಗಿನಲ್ಲಿ ಹೈದರಾಬಾದ್ ನ ವ್ಯಕ್ತಿಯಿಂದ 7.12 ಕೋಟಿ ರೂ. ಸುಲಿಗೆ!

ಸಾಂದರ್ಭಿಕ ಚಿತ್ರ
ಹೈದರಾಬಾದ್, ಜ.4: ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರ ತಂಡವೊಂದು ಹೈದರಾಬಾದ್ ನ 81 ವರ್ಷದ ವಯೋವೃದ್ಧರೊಬ್ಬರನ್ನು ‘ಡಿಜಿಟಲ್ ಬಂಧನ’ದಲ್ಲಿರಿಸಿ 7.12 ಕೋಟಿ ರೂ. ದೋಚಿದ ಪ್ರಕರಣ ರವಿವಾರ ವರದಿಯಾಗಿದೆ. ಮಾದಕದ್ರವ್ಯ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿದ್ದೀರೆಂದು ವೃದ್ಧ ವ್ಯಕ್ತಿಗೆ ಬೆದರಿಕೆ ಹಾಕಿರುವ ವಂಚಕರು, ದೃಢೀಕರಣದ ನೆಪದಲ್ಲಿ ಹಣ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರಿಯರ್ ಕಂಪೆನಿಯವರೆಂದು ಹೇಳಿಕೊಂಡು ವಂಚಕರು ಅಕ್ಟೋಬರ್ 27ರಂದು ವೃದ್ಧ ವ್ಯಕ್ತಿಗೆ ಕರೆ ಮಾಡಿ, ತಮ್ಮ ಹೆಸರಿನಲ್ಲಿ ಮುಂಬೈನಿಂದ ಥೈಲ್ಯಾಂಡ್ ಗೆ ಪಾರ್ಸೆಲ್ ಕಳುಹಿಸಲಾಗಿದ್ದು, ಅದರಲ್ಲಿ ಎಂಡಿಎಂಎ ಮಾದಕದ್ರವ್ಯವಿತ್ತು. ಅಲ್ಲದೆ ಪಾಸ್ಪೋರ್ಟ್ ಗಳು, ಕೆಲವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳೂ ಪತ್ತೆಯಾಗಿವೆ. ಈ ಪಾರ್ಸೆಲ್ ನ್ನು ತಡೆಹಿಡಿಯಲಾಗಿದ್ದು, ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದರು.
ಬಳಿಕ ಇನ್ನೋರ್ವ ವ್ಯಕ್ತಿ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ವೃದ್ಧರಿಗೆ ಕರೆ ಮಾಡಿದ್ದು, ಮಾದಕದ್ರವ್ಯ ಕಳ್ಳಸಾಗಣೆ, ಕಪ್ಪುಹಣ ಬಿಳುಪು ಹಾಗೂ ಭಯೋತ್ಪಾದಕ ಚಟುವಟಿಕೆಗಳ ಬೃಹತ್ ಜಾಲದಲ್ಲಿ ಅವರು ಶಾಮೀಲಾಗಿದ್ದಾರೆಂದು ಆಪಾದಿಸಿದ್ದನು.
ವೃದ್ಧರ ಬ್ಯಾಂಕ್ ಖಾತೆ ಹಾಗೂ ಹೂಡಿಕೆಗಳ ವಿವರಗಳನ್ನು ದೃಢಪಡಿಸುವ ನೆಪದಲ್ಲಿ, ಪ್ರಕರಣದಿಂದ ಹೊರಬರಬೇಕಾದರೆ ತಾನು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಮತ್ತು ನಿರಪರಾಧಿಯೆಂದು ದೃಢಪಟ್ಟ ಬಳಿಕ ಹಣವನ್ನು ಹಿಂತಿರುಗಿಸಲಾಗುವುದೆಂದು ತಿಳಿಸಿದ್ದನು. ಈ ವಿಷಯವಾಗಿ ಯಾರೊಂದಿಗೂ ಮಾತನಾಡದಂತೆ ಆತ ಎಚ್ಚರಿಕೆ ನೀಡಿದ್ದನು.
ಅಮಾಯಕ ವಯೋವೃದ್ಧರು ಎರಡು ತಿಂಗಳ ಅವಧಿಯಲ್ಲಿ 7.12 ಕೋಟಿ ವರ್ಗಾಯಿಸಿದ್ದರು. ಇನ್ನೂ 1.2 ಕೋಟಿ ವರ್ಗಾಯಿಸುವಂತೆ ವಂಚಕರು ಒತ್ತಾಯಿಸಿದಾಗ ತಾವು ಮೋಸಹೋಗಿರುವುದು ಅವರಿಗೆ ಅರಿವಾಯಿತು. ಆನಂತರ ಅವರು ಡಿಸೆಂಬರ್ 30ರಂದು ತೆಲಂಗಾಣ ಸೈಬರ್ ಭದ್ರತಾ ದಳ(ಟಿಜಿಸಿಎಸ್ಬಿ)ಕ್ಕೆ ದೂರು ನೀಡಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ವ್ಯಕ್ತಿ ಈ ಹಿಂದೆ ಉದ್ಯಮವೊಂದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.







